ಬಾಗ್ದಾದ್ ದ ಕರದ ಪ್ರದೇಶದಲ್ಲಿ ಆತ್ಮಹತ್ಯಾ ದಾಳಿಗೆ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ನಾಗರಿಕರು
ಇರಾಕ್: ಬಾಗ್ದಾದ್ ನಲ್ಲಿ ನಿನ್ನೆ(ಭಾನುವಾರ) ಮುಂಜಾನೆ ಸಂಭವಿಸಿದ ಆತ್ಮಹತ್ಯಾ ಬಾಂಬ್ ದಾಳಿಗೆ ಕನಿಷ್ಠ 213 ಮಂದಿ ಸಾವನ್ನಪ್ಪಿದ್ದಾರೆ.200ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಇದು ಇರಾಕ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಅತ್ಯಂಕ ಭಯಾನಕವಾದದ್ದು ಎಂದು ವೈದ್ಯಕೀಯ ಅಧಿಕಾರಿಗಳು ಬಣ್ಣಿಸಿದ್ದಾರೆ.
ಬಾಗ್ದಾದ್ ದ ಕರ್ರದ ಜಿಲ್ಲೆಯಲ್ಲಿ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಆತ್ಮಹತ್ಯಾ ಕಾರ್ ಬಾಂಬ್ ನುಗ್ಗಿತು. ಈ ಸಂದರ್ಭದಲ್ಲಿ ಜನರು ರಂಜಾನ್ ಹಬ್ಬಕ್ಕೆ ವಸ್ತುಗಳ ಖರೀದಿ ಸಂಭ್ರಮ, ಸಡಗರದಲ್ಲಿದ್ದರು.
ಘಟನೆಯಲ್ಲಿ ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ.ಇರಾಕ್ ಪ್ರಧಾನಿ ಹೈದರ್ ಅಲ್ ಅಬದಿ, ದಾಳಿಗೆ ಕಾರಣಕರ್ತರಾದವರನ್ನು ಶಿಕ್ಷಿಸಲಾಗುವುದು ಎಂದು ಹೇಳಿದ್ದಾರೆ. ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಿ ಪ್ರಧಾನ ಮಂತ್ರಿ ಸಚಿವಾಲಯ ಮೂರು ದಿನಗಳ ಶ್ರದ್ಧಾಂಜಲಿ ಆಚರಣೆ ಘೋಷಿಸಿದೆ.
ದೇಶದ ಭದ್ರತೆ ಕ್ರಮಗಳಲ್ಲಿ ಬದಲಾವಣೆ ತರಲಾಗುವುದು ಎಂದು ಹೇಳಿದ ಪ್ರಧಾನಿ, ನಕಲಿ ಬಾಂಬ್ ತಯಾರಕರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹೇಳಿದ್ದಾರೆ.
ಇರಾಕಿ ಪಡೆ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ವಿರುದ್ಧ ಗೆಲುವು ಗಳಿಸಿ ಫಲ್ಲುಜಾ ನಗರವನ್ನು ವಶಪಡಿಸಿಕೊಂಡ ವಾರದಲ್ಲೇ ಉಗ್ರರು ಈ ದಾಳಿ ನಡೆಸಿದ್ದಾರೆ.