ಕಾರಿನಲ್ಲಿ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾದ ಕಾಸ್ಟಿಲ್
ವಾಷಿಂಗ್ಟನ್: ಮಿನ್ನಸೊಟೊದಲ್ಲಿ ಕಾರು ಚಾಲನೆ ಮಾಡುತ್ತಿದ್ದ ನೀಗ್ರೋ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿ ಕೊಂದ ದೃಶ್ಯವನ್ನು ಲೈವ್ ಸ್ಟ್ರೀಮ್ ವಿಡಿಯೋ ಮಾಡಿ ಆತನ ಗೆಳತಿ ಫೇಸ್ ಬುಕ್ ನಲ್ಲಿ ಹಾಕಿರುವುದು ಇದೀಗ ವೈರಲ್ ಆಗಿದೆ.
ಮಿನ್ನೆಸೊಟಾ ಪೊಲೀಸರು ಗುಂಡಿಕ್ಕಿ ಕೊಂದಿರುವ ವಿಡಿಯೋ ನಿನ್ನೆಯಿಂದ ವೈರಲ್ ಆಗಿದೆ. ''ದೇವರೇ, ದಯವಿಟ್ಟು ಆತ ಸಾವಿಗೀಡಾಗಿದ್ದಾನೆ ಎಂದು ನನಗೆ ಹೇಳಬೇಡಿ, ನನ್ನ ಪತಿ ಹೀಗೆ ಹೊರಟುಹೋಗಿದ್ದಾನೆ ಎಂದು ಹೇಳಬೇಡಿ. ನೀವು ನಾಲ್ಕು ಬುಲ್ಲೆಟ್ ಗಳನ್ನು ಆತನ ದೇಹದ ಮೇಲೆ ಗುಂಡಿಕ್ಕಿದ್ದೀರಿ'' ಎಂದು ಫೇಸ್ ಬುಕ್ ನಲ್ಲಿ ಲಾವಿಶ್ ರೆನಾಲ್ಡ್ಸ್ ಎಂದು ಗುರುತಿಸಿಕೊಂಡಿರುವ ಮಹಿಳೆ ಹೇಳಿದ್ದಾರೆ.
ಅಧಿಕಾರಿಯಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಕುಟುಂಬಸ್ಥರು ಮತ್ತು ಸಾಮಾಜಿಕ ಕಾರ್ಯಕರ್ತರು ಆತನನ್ನು ಶಾಲೆಯ ಕ್ಯಫಟೇರಿಯಾದ ಕೆಲಸಗಾರ ಫಿಲಂಡೋ ಕಾಸ್ಟಿಲ್ ಎಂದು ಗುರುತಿಸಿದ್ದಾರೆ.
ಕಾರಿನ ಚಾಲಕರ ಸೀಟಿನಲ್ಲಿ ಕಾಸ್ಟಿಲ್ ಕುಳಿತುಕೊಂಡಿದ್ದಾನೆ. ಆತನ ಬಿಳಿ ಟೀ ಶರ್ಟ್ ನಲ್ಲಿ ರಕ್ತದೋಕುಳಿ ಹರಿದಿದೆ. ರೆನಾಲ್ಡ್ ಆತನ ಪಕ್ಕ ಕುಳಿತಿದ್ದು ಅವರ ಪುಟ್ಟ ಮಗಳು ಕೂಡ ಕಾರಿನಲ್ಲಿದ್ದಳು.
ಲುಸಿಯಾನಾದಲ್ಲಿ ಕಪ್ಪು ವರ್ಣದವನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಈ ದೃಶ್ಯವನ್ನು 1.7 ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕಾರಿನ ಹಿಂಬದಿ ಟೈಲ್ ಲೈಟ್ ಮುರಿದಿದೆ ಎಂದು ಪೊಲೀಸರು ನಿಲ್ಲಿಸಲು ಹೇಳಿದ್ದರಂತೆ. ಅದರಂತೆ ಕಾರು ನಿಲ್ಲಿಸಲು ಹೇಳಿದಾಗ ಕಾರಿನಲ್ಲಿ ಮಾದಕವಸ್ತು ಕೂಡ ಇದೆ ಎಂದು ಹೇಳಿ ಕಾಸ್ಟಿಲ್ ನನ್ನು ವಿಚಾರಣೆ ಮಾಡಲು ಆರಂಭಿಸುತ್ತಾರೆ. ಕಾಸ್ಟಿಲ್ ಬಳಿ ಪರವಾನಗಿ ಇತ್ತು. ಆತ ಬಂಧೂಕನ್ನು ಹೊತ್ತೊಯ್ಯುತಿದ್ದ. ಪೊಲೀಸರು ಕೇಳಿದಾಗ ಲೈಸೆನ್ಸ್ ಮತ್ತು ವಾಹನ ರಿಜಿಸ್ಟ್ರೇಷನ್ ನ್ನು ತೆಗೆಯಲೆಂದು ಪಾಕೆಟ್ ಗೆ ನೋಡುತ್ತಿದ್ದಾಗ ಗುಂಡಿಕ್ಕಿ ಕೊಲ್ಲಲಾಯಿತು. ಆತನ ತೋಳುಗಳ ಮೇಲೆ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತನ್ನ ಪ್ರಿಯಕರನನ್ನು ಕೊಂದ ಬಗ್ಗೆ ಕೂಡ ರೆನಾಲ್ಡೋ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಪೊಲೀಸ್ ಅಧಿಕಾರಿ ಚೀನಾ ದೇಶದವರಾಗಿರಬಹುದು ಎಂದು ಅವಳು ತಿಳಿಸಿದ್ದಾಳೆ. ಈ ವಿಡಿಯೋ ಸುಮಾರು 10 ನಿಮಿಷವಿದೆ.
ಸ್ಥಳದಿಂದ ಪೊಲೀಸರು ಹ್ಯಾಂಡ್ ಗನ್ ನ್ನು ವಶಪಡಿಸಿಕೊಂಡಿದ್ದಾರೆ.ಘಟನೆ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಇನ್ನು ಫೇಸ್ ಬುಕ್ ನಲ್ಲಿ ಈ ಸಂಬಂಧ ಜಸ್ಟಿಸ್ ಫಾರ್ ಫಿಲಂಡೊ ಕಾಸ್ಟಿಲ್ ಎಂಬ ಹೆಸರಿನಲ್ಲಿ ಆತನನ್ನು ಬೆಂಬಲಿಸಿ ಪೇಜ್ ತೆರೆಯಲಾಗಿದೆ.