ವಾಷಿಂಗ್ ಟನ್: ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಚೀನಾ ಹಕ್ಕು ಪ್ರತಿಪಾದನೆಯನ್ನು ತಿರಸ್ಕರಿಸಿ ಫಿಲಿಪೈನ್ಸ್ ಪರ ಬಂದಿರುವ ತೀರ್ಪನ್ನು ನಿರಾಕರಿಸಿರುವ ಚೀನಾ, ತನ್ನ ಹಕ್ಕು ಪ್ರತಿಪಾದನೆಯನ್ನು ತಿರಸ್ಕರಿಸಿದರೆ ಘರ್ಷಣೆಗಳು ಹೆಚ್ಚುತ್ತವೆ ಎಂದು ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆಯಲ್ಲಿರುವ ಚೀನಾದ ರಾಯಭಾರಿ ದಕ್ಷಿಣ ಚೀನಾ ಸಮುದ್ರ ವಿವಾದ ಪ್ರಕರಣದಲ್ಲಿ ವಿಶ್ವಸಂಸ್ಥೆಯ ನ್ಯಾಯಮಂಡಳಿ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನ್ಯಾಯಮಂಡಳಿ ಚೀನಾದ ಹಕ್ಕು ಪ್ರತಿಪಾದನೆಯನ್ನು ಕಡೆಗಣಿಸಿರುವುದು ವಿವಾದಿತ ಪ್ರದೇಶದಲ್ಲಿ ಘರ್ಷಣೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ ವಿವಾದಿತ ಜಲಪ್ರದೇಶದ ವ್ಯಾಪಾರ ವಹಿವಾಟು ಮಾರ್ಗಕ್ಕೆ ಸಂಬಂಧಿಸಿದಂತೆ ಇತರ ರಾಷ್ಟ್ರಗಳೊಂದಿಗೆ ಚೀನಾ ಚರ್ಚೆ ನಡೆಸಲು ಬದ್ಧವಾಗಿದೆ ಎಂದು ಚೀನಾದ ರಾಯಭಾರಿ ತಿಳಿಸಿದ್ದಾರೆ. ದಕ್ಷಿಣ ಚೀನಾ ಸಮುದ್ರದ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಲು ಕೆಲವು ವರ್ಷಗಳಿಂದ ಏಷ್ಯಾದೆಡೆಗೆ ಅಮೆರಿಕ ನೀಡುತ್ತಿರುವ ಪ್ರಾಮುಖ್ಯತೆಯೇ ಕಾರಣ ಎಂದು ಚೀನಾ ಆರೋಪಿಸಿದೆ. ವಿಶ್ವ ಸಂಸ್ಥೆ ನ್ಯಾಯಮಂಡಳಿ ನೀಡಿರುವ ಆದೇಶ ಇತರ ರಾಷ್ಟ್ರಗಳೊಂದಿಗೆ ಚರ್ಚೆ ನಡೆಸುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ ಎಂದು ಚೀನಾದ ರಾಯಭಾರಿ ಅಭಿಪ್ರಾಯಪಟ್ಟಿದ್ದಾರೆ. ತೀರ್ಪನ್ನು ನಿರಾಕರಿಸಿರುವ ಚೀನಾದ ನಡೆ ಬಗ್ಗೆ ಅಂತಾರಾಷ್ಟ್ರೀಯ ಕಾನೂನು ತಜ್ಞರು ಪ್ರತಿಕ್ರಿಯೆ ನೀಡಿದ್ದು, ಚೀನಾ ನ್ಯಾಯಮಂಡಳಿ ತೀರ್ಪನ್ನು ಪಾಲಿಸದೆ ಇದ್ದರೆ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.