ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರ ವಿಧಾನಸಭಾ ಕ್ಷೇತ್ರದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಪ್ರತಿನಿಧಿಸುವ ಪಕ್ಷ ಪಿಎಂಎಲ್-ಎನ್ ಬಹುಮತಗಳಿಸಿದ್ದು, ಗೆಲುವಿನ ಬಗ್ಗೆ ಮಾತನಾಡಿರುವ ನವಾಜ್ ಷರೀಫ್, ಕಾಶ್ಮೀರ ಪಾಕಿಸ್ತಾನದ ಭಾಗವಾಗುವ ದಿನಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಮುಜಾಫರಾಬಾದ್ ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ನವಾಜ್ ಷರೀಫ್, ನಾವು ಕಾಶ್ಮೀರ ಪಾಕಿಸ್ತಾನದ ಭಾಗವಾಗುವ ದಿನವನ್ನು ಎದುರುನೋಡುತ್ತಿದ್ದೇವೆ ಎಂದಿದ್ದಾರೆ. ಲಂಡನ್ ನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಮೊದಲ ಬಾರಿ ನವಾಜ್ ಷರೀಫ್ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ್ದು, ಕಾಶ್ಮೀರದ ಸ್ವಾಯತ್ತತೆಗಾಗಿ ನಡೆಯುತ್ತಿರುವ ಚಳುವಳಿಯಲ್ಲಿ ಪ್ರಾಣಾರ್ಪಣೆ ಮಾಡುತ್ತಿರುವವರನ್ನು ಮರೆಯಬಾರದು ಎಂದು ಷರೀಫ್ ಕರೆ ನೀಡಿದ್ದಾರೆ.
ಕಾಶ್ಮೀರದ ಸ್ವಾಯತ್ತತೆಗಾಗಿ ನಡೆಯುತ್ತಿರುವ ಚಳುವಳಿ ಯಶಸ್ವಿಯಾಗುವವರೆಗೂ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ, ಕಾಶ್ಮೀರ ಪಾಕಿಸ್ತಾನದ ಭಾಗವಾಗುವ ದಿನಕ್ಕಾಗಿ ಕಾಯುತ್ತಿದ್ದೇವೆ ಎಂದು ಷರೀಫ್ ಹೇಳಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು 41 ಸ್ಥಾನಗಳಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಪ್ರತಿನಿಧಿಸುತ್ತಿರುವ ಪಿಎಂಎಲ್-ಎನ್ ಪಕ್ಷ ಗೆಲುವು ಸಾಧಿಸಿದೆ. ಚುನಾವಣಾ ಫಲಿತಾಂಶ ಬಹಿರಂಗವಾಗುತ್ತಿದ್ದಂತೆಯೇ ಸಂತಸ ತಡೆಯಲು ಸಾಧ್ಯವಾಗದೇ ಮುಜಾಫರಾಬಾದ್ ಗೆ ಬಂದಿದ್ದಾಗಿ ನವಾಜ್ ಷರೀಫ್ ಸಾರ್ವಜನಿಕ ಸಭೆಯಲ್ಲಿ ತಿಳಿಸಿದ್ದಾರೆ.