ಮಾಲೆ: ಮಾಲ್ದೀವ್ಸ್ನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಅಹಮದ್ ಅದೀಬ್ಗೆ ಕೋರ್ಟ್ 15 ವರ್ಷ ಜೈಲುಶಿಕ್ಷೆ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅದೀಬ್ ಅವರ ಇಬ್ಬರು ಅಂಗರಕ್ಷಕರಿಗೂ ಸಹ ಕೋರ್ಟ್ ತಲಾ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅಬ್ದುಲ್ಲಾ ಯಮೀನ್ ತೆರಳುತ್ತಿದ್ದ ದೋಣಿಯಲ್ಲಿ ಬಾಂಬ್ ಇಡಲಾಗಿತ್ತು. ಬಾಂಬ್ ಸ್ಪೋಟದಲ್ಲಿ ಅದೃಷ್ಟವಶಾತ್ ಅಬ್ದುಲ್ಲಾ ಅಪಾಯದಿಂದ ಪಾರಾಗಿದ್ದರು. ಆದರೆ ಅವರ ಪತ್ನಿಗೆ ಗಾಯವಾಗಿತ್ತು. ಈ ಪ್ರಕರಣದ ತನಿಖೆಯನ್ನು ಎಫ್ಬಿಐಗೆ ವಹಿಸಲಾಗಿತ್ತು.
ಅದೀಬ್ಗೆ ಶಿಕ್ಷೆಯಾಗುವ ಮೂಲಕ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರಿಗೆ ವಿರೋಧಿಗಳಿಲ್ಲದಂತಾಗಿದೆ. ಇದಕ್ಕೂ ಮುನ್ನ ಭಯೋತ್ಪಾದನೆಗೆ ಸಹಕಾರ ನೀಡಿದ ವಿವಾದಾತ್ಮಕ ಆರೋಪದ ಮೇಲೆ ಮಾಲ್ದೀವ್ಸ್ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಷೀದ್ ಅವರಿಗೆ ಕಳೆದ ವರ್ಷ 17 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಷೀದ್ ಚಿಕಿತ್ಸೆಯ ನೆಪವೊಡ್ಡಿ ಬ್ರಿಟನ್ಗೆ ತೆರಳಿದ್ದರು. ಬ್ರಿಟನ್ ಕಳೆದ ತಿಂಗಳು ನಷೀದ್ಗೆ ರಾಜಕೀಯ ಆಶ್ರಯ ನೀಡಿದ್ದು, ಅವರು ಬ್ರಿಟನ್ನಲ್ಲೇ ಉಳಿದುಕೊಂಡಿದ್ದಾರೆ.