ವಿದೇಶ

ಮೋದಿ ಸಿದ್ಧಾಂತ: ಮೋದಿ ದೂರದೃಷ್ಟಿಗೆ ಅಮೆರಿಕ ಶ್ಲಾಘನೆ

Sumana Upadhyaya

ವಾಷಿಂಗ್ಟನ್: ಭಾರತ-ಅಮೆರಿಕ ಸಂಬಂಧ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು 'ಮೋದಿ ಸಿದ್ದಾಂತ' ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಸ್ ನಾಮಕರಣ ಮಾಡಿದ್ದಾರೆ.
ಈ ವಾರದ ಆರಂಭದಲ್ಲಿ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿದ್ದನ್ನು ಐತಿಹಾಸಿಕ ಭೇಟಿ ಎಂದು ಬಣ್ಣಿಸಿದ ಅವರು, ಅಮೆರಿಕ ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದಕ್ಕೆ ಮುನ್ನ ಮೋದಿಯವರಲ್ಲಿ ಸ್ಪಷ್ಟ ಮತ್ತು ಬಲವಾದ ದೂರದೃಷ್ಟಿಯಿತ್ತು ಎಂದು ಹೇಳಿದ್ದಾರೆ.

ಅವರ ಈ ದೂರದೃಷ್ಟಿಯನ್ನು ಮೋದಿ ಸಿದ್ಧಾಂತ ಎಂದು ಕರೆಯಲು ಬಯಸುತ್ತೇನೆ. ಇದು ಇತಿಹಾಸದ ಹಿಂಜರಿಕೆಯನ್ನು ನಿವಾರಿಸಿ ಎರಡೂ ದೇಶಗಳ ನಡುವೆ ಸಾಮಾನ್ಯ ಹಿತಾಸಕ್ತಿ ಹಂಚಿಕೊಳ್ಳಲು ವಿದೇಶಾಂಗ ನೀತಿಯ ಅಡಿಪಾಯ ಹಾಕುತ್ತದೆ ಎಂದರು.

ಮೋದಿಯವರ ಸಿದ್ಧಾಂತ, ಒಪ್ಪಂದ ಮಾಡಿಕೊಂಡ ಭದ್ರತೆಯನ್ನು ಮುರಿದರೆ ಏಷ್ಯಾ ಖಂಡದಲ್ಲಿ ಹೇಗೆ ಅನಿಶ್ಚಿತತೆ ಉಂಟಾಗುತ್ತದೆ ಎಂಬುದನ್ನು ವಿವರಿಸಿದೆ ಮತ್ತು ಅಂತಾರಾಷ್ಟ್ರೀಯ ಕಾನೂನು ಮತ್ತು ನೀತಿಗೆ ಬೇರೆಯವರು ಯಾವ ರೀಚಿ ಬೆಂಬಲ ನೀಡಬೇಕೆಂದು ಮತ್ತು ಭಾರತದ ನಿಷ್ಠೆಯ ಬಗ್ಗೆ ಪುನರುಚ್ಛರಿಸಿದೆ ಎಂದು ಬಿಸ್ವಾಸ್ ಶ್ಲಾಘಿಸಿದ್ದಾರೆ.

ಅಮೆರಿಕಾದ ಒಬಾಮಾ ಆಡಳಿತದಲ್ಲಿ ಭಾರತ ಪ್ರಮುಖವಾಗಿದ್ದು, ಅಮೆರಿಕದ ಭದ್ರತೆ ಮತ್ತು ಸಮೃದ್ಧಿ ರಚನಾತ್ಮಕವಾಗಿ ಇಂಡೋ-ಫೆಸಿಫಿಕ್ ನ ಭದ್ರತೆ ಮತ್ತು ಸಮೃದ್ಧತೆಯನ್ನು ಅವಲಂಬಿಸಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT