ವಿದೇಶ

ಬೀಜಿಂಗ್ ನಲ್ಲಿ ದಾಖಲೆ ಪ್ರಮಾಣದ ವಿದ್ಯುತ್ ಚಾಲಿತ ವಾಹನಗಳ ನೋಂದಣಿ!

Srinivas Rao BV

ಬೀಜಿಂಗ್: ಅತಿ ಹೆಚ್ಚು ವಾಯುಮಾಲಿನ್ಯ ಎದುರಿಸುತ್ತಿರುವ ಬೀಜಿಂಗ್ ನಲ್ಲಿ ದಾಖಲೆ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ನೋಂದಣಿಗಾಗಿ ಅರ್ಜಿಗಳು ಬಂದಿವೆ.

ಜೂ.8 ರಂದು ಮುಕ್ತಾಯಗೊಂಡ ಮೂರನೇ ಹಂತದ ಅರ್ಜಿ ಸಲ್ಲಿಕೆ ವೇಳೆ ದಾಖಲೆಯ ಪ್ರಮಾನದಲ್ಲಿ ಅರ್ಜಿಗಳು ಬಂದಿದ್ದು, 17 ,600 ಜನರು ವಿದ್ಯುತ್ ಚಾಲಿತ ವಾಹನಗಳ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದಿನ ಸುತ್ತಿಗಿಂತ 5 ಸಾವಿರದಷ್ಟು ಹೆಚ್ಚು ಜನರು ಮೂರನೇ ಸುತ್ತಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಬೀಜಿಂಗ್ ನಲ್ಲಿ ಕಾರು ಕೋಟಾ ಹಂಚಿಕೆ ಮಾಡುವ ಸಂಸ್ಥೆ ತಿಳಿಸಿದೆ.

ಪ್ರಸಕ್ತ ಸಾಲಿನಲ್ಲಿ 60,000 ಹೊಸ ವಿದ್ಯುತ್ ಚಾಲಿತ ವಾಹನಗಳನ್ನು ನೋಂದಣಿ ಮಾಡಿ ರಸ್ತೆಗಿಳಿಸಲು ಬೀಜಿಂಗ್ ಯೋಜನೆ ಹಾಕಿದೆ. ಈಗಾಗಲೇ ಎರಡು ಹಂತಗಳಲ್ಲಿ 25 ,424 ವಿದ್ಯುತ್ ಚಾಲಿತ ವಾಹನಗಳನ್ನು ನೋಂದಣಿ ಮಾಡಲಾಗಿದೆ. ಆಗಸ್ಟ್ ನಲ್ಲಿ ಮತ್ತೊಂದು ಹಂತದಲ್ಲಿ ವಾಹನ ನೋಂದಣಿ ಅರ್ಜಿಗಳನ್ನು ಪಡೆಯುವ ಪ್ರಕ್ರಿಯೆ ಅಂತ್ಯಗೊಳ್ಳಲಿದೆ ಎಂದು ಬೀಜಿಂಗ್ ಟೈಮ್ಸ್ ವರದಿ ಮೂಲಕ ತಿಳಿದುಬಂದಿದೆ.  ಕೋಟಾ ಹೆಚ್ಚಿಸದೇ ಇದ್ದರೆ ಹೊಸದಾಗಿ ಅರ್ಜಿ ಸಲ್ಲಿಸುವವರು ಮುಂದಿನ ವರ್ಷದ ವರೆಗೂ ಕಾಯಬೇಕಾಗುತ್ತದೆ.

ಬೀಜಿಂಗ್ ನಲ್ಲಿ ಲೈಸೆನ್ಸ್ ಲಾಟರಿ ವ್ಯವಸ್ಥೆ ಹಲವರನ್ನು ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುವಂತೆ ಮಾಡಿದ್ದು, ವಿದ್ಯುತ್ ವಾಹನಗಳನ್ನು ಖರೀದಿಸುವವರಿಗೆ ಸರ್ಕಾರದಿಂದ ಸಬ್ಸಿಡಿ ಸಿಗುವುದು ಅಲ್ಲದೇ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮದಿಂದ ವಿನಾಯ್ತಿಯನ್ನು ನೀಡಲಾಗುತ್ತದೆ ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬೇಡಿಕೆ ಉಂಟಾಗಿದೆ.

SCROLL FOR NEXT