ನವದೆಹಲಿ: ಭಾರತದ ಮಹತ್ವಾಕಾಂಕ್ಷಿಯಾದ ಎನ್ಎಸ್ ಜಿ ಸದಸ್ಯತ್ವಕ್ಕೆ ಚೀನಾ ಅಡ್ಡಗಾಲು ಹಾಕುತ್ತಿದ್ದರೂ ಚೀನಾ ಅಧ್ಯಕ್ಷರ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.
63 ನೇ ಹುಟ್ಟುಹಬ್ಬ ಆಚರಿಸಿಕೊಂಡ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗೆ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ವೈಬೋ ಮೂಲಕ ಶುಭಕೋರಿದ್ದು, ಅವರ ಒಳ್ಳೆಯ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಶುಭ ಹಾರೈಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷರು ತಾಷ್ಕೆಂಟ್ ನಲ್ಲಿರುವ ಶಾಂಘೈ ಸಹಕಾರ ಸಂಘಟನೆಯ ಕಾರ್ಯಕ್ರಮದಲ್ಲಿ ಜೂ.23-24 ರಂದು ಭಾಗವಹಿಸಿ ಭೇಟಿ ಮಾಡಲಿದ್ದಾರೆ. ಜೂ.14 ರಂದು ಭಾರತದ ಎನ್ ಎಸ್ ಜಿ ಸದಸ್ಯತ್ವದ ಬಗ್ಗೆ ಲೇಖನ ಪ್ರಕಟಿಸಿದ್ದ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ, ಭಾರತಕ್ಕೆ ಸದಸ್ಯತ್ವ ನೀಡುವುದರಿಂದ ಪಾಕಿಸ್ತಾವನ್ನು ಪ್ರಚೋದಿಸಿದಂತಾಗಲಿದೆ ಎಂದು ಬರೆದಿತ್ತು.