ಲಂಡನ್: ಬ್ರೆಕ್ಸಿಟ್ ಜನಮತ ಸಂಗ್ರಹದ ನಂತರ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದು, ನಿರ್ಗಮಿತ ಬ್ರಿಟನ್ ಪ್ರಧಾನಿ ಡೇವಿಡ್ಕೆ ಕೆಮರಾನ್ ಅವರು, ತಮ್ಮ ಮುಂದಿನ ಪ್ರಧಾನಿ ಒಕ್ಕೂಟದಿಂದ ಹೊರನಡೆಯುವ ಪ್ರಕ್ರಿಯೆ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಕೆಮರಾನ್ ಹೇಳಿಕೆಯನ್ನು ಒಪ್ಪದ ಯೂರೋಪಿಯನ್ ಒಕ್ಕೂಟ(ಇಯು)ದ ಮುಖ್ಯಸ್ಥರು ಆದಷ್ಟು ಬೇಗ ಒಕ್ಕೂಟದಿಂದ ಹೊರ ನಡೆಯುವ ಪ್ರಕ್ರಿಯೆ ಆರಂಭಿಸುವಂತೆ ಬ್ರಿಟನ್ ಗೆ ಸೂಚಿಸಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಇಯು ಅಧ್ಯಕ್ಷ ಡೋನಾಲ್ಡ್ ಟಸ್ಕ್, ಯೂರೋಪಿಯನ್ ಆಯೋಗದ ಮುಖ್ಯಸ್ಥ ಜೀನ್-ಕ್ಲೌಡ್ ಜಂಕರ್ ಹಾಗೂ ಇಯು ಸಂಸತ್ ನಾಯಕ ಮಾರ್ಟಿನ್ ಶುಲ್ಜ್ ಅವರು, ಬ್ರಿಟನ್ ಸರ್ಕಾರ ಬ್ರಿಟಿಷ್ ಜನತೆಯ ನಿರ್ಧಾರಕ್ಕೆ ಬದ್ಧವಾಗಿ ಆದಷ್ಟು ಬೇಗ ಒಕ್ಕೂಟ ತೊರೆಯಬೇಕು ಎಂದು ನಾವು ಬಯಸುತ್ತೇನೆ. ಇದೇ ವೇಳೆ ಇದು ತುಂಬಾ ನೋವಿನ ಪ್ರಕ್ರಿಯೆ ಎಂದು ಸಹ ವಿಷಾದ ವ್ಯಕ್ತಪಡಿಸಿದ್ದಾರೆ.
ಜನಮತಗಣನೆಯಲ್ಲಿ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಅಕ್ಟೋಬರ್ ನಲ್ಲಿ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಡೇವಿಡ್ ಕೆಮರಾನ್ ಅವರು ಘೋಷಿಸಿದ್ದಾರೆ. ಅಲ್ಲದೆ ನೂತನ ಪ್ರಧಾನಿ ಒಕ್ಕೂಟದಿಂದ ಹೊರ ನಡೆಯುವ ಪ್ರಕ್ರಿಯೆ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕು ಎಂಬುದಾಗಿ ಜನಮತಗಣನೆಯಲ್ಲಿ ಸ್ಪಷ್ಟ ಜನಾಭಿಪ್ರಾಯ ಬಂದಿದೆ. ಹೊರಹೋಗುವ ಪರವಾಗಿ ಸುಮಾರು ಷೇ.51. 8ರಷ್ಟು ಮತಗಳು ಹಾಗೂ ಬ್ರಿಟನ್ ಐರೋಪ್ಯ ಒಕ್ಕೂಟದಲ್ಲಿ ಉಳಿಯಬೇಕು ಎಂಬುದರ ಪರವಾಗಿ ಶೇಕಡಾ 48.2ರಷ್ಟು ಮತಗಳು ಬಂದಿವೆ. ಹೀಗಾಗಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕಾದ ಇಕ್ಕಟ್ಟಿಗೆ ಸಿಲುಕಿದೆ.