ವಾಷಿಂಗ್ಟನ್ : ಜೈಷೆ ಮೊಹಮ್ಮದ್ ಮತ್ತು ಲಷ್ಕರೆ ತೊಯ್ಬಾ ಉಗ್ರ ಸಂಘಟನೆಗಳಿಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಉಗ್ರ ಕೃತ್ಯಗಳನ್ನು ತಡೆಗಟ್ಟುವುದಕ್ಕಾಗಿ ಪಾಕ್ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರವನ್ನು ಅಮೆರಿಕ ಸ್ವಾಗತಿಸಿದೆ.
ಪಾಕಿಸ್ತಾನ ಮತ್ತು ಅಮೆರಿಕದ ಪ್ರತಿನಿಧಿಗಳ ನಡುವಿನ ಮಾತುಕತೆಯಲ್ಲಿ ಪಾಕಿಸ್ತಾನ ಈ ನಿರ್ಧಾರವನ್ನು ಪ್ರಕಟಿಸಿದೆ.
ಅಮೆರಿಕದ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ನೇತೃತ್ವದ ಪ್ರತಿನಿಧಿಗಳು ಮತ್ತು ಪಾಕ್ ಪ್ರಧಾನಿ ನವಾಜ್ ಶರೀಫ್ ರ ಸಲಹೆಗಾರ ಸರ್ತಾಜ್ ಅಜೀಜ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಮಾತುಕತೆ ನಡೆದಿತ್ತು. ಈ ಮಾತುಕತೆಯಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆಗಳಾದ ಅಲ್‌ಖೈದಾ, ಹಖ್ಖಾನಿ ನೆಟ್ವರ್ಕ್, ಲಷ್ಕರೆ ತೊಯ್ಬಾ ಮತ್ತು ಇನ್ನಿತರ ಉಗ್ರ ಸಂಘಟನೆಗಳ ವಿರುದ್ಧ ತಾವು ಕ್ರಮಕೈಗೊಳ್ಳುವುದಾಗಿ ಪಾಕ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳು ಭಯೋತ್ಪಾದನೆಯನ್ನು ಬುಡಸಮೇತ ಕಿತ್ತೊಗೆಯಲು ಯಾವೆಲ್ಲ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದು, ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಬದ್ಧರಾಗಿರುವುದಾಗಿ ಪಾಕ್ ತೀರ್ಮಾನ ಕೈಗೊಂಡಿವೆ.