ವಾಷಿಂಗ್ಟನ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ(ಎಲ್ಇಟಿ) ಮತ್ತು ಜೈಷ್-ಇ-ಮೊಹಮ್ಮದ್(ಜೆಇಎಂ) ವಿರುದ್ಧ ಸಮರ ನಡೆಸುವ ದೃಷ್ಟಿಯಿಂದ ಪರಸ್ಪರ ಸಹಯೋಗವನ್ನು ಇನ್ನಷ್ಟು ಹೆಚ್ಚಿಸಲು ಭಾರತ ಮತ್ತು ಅಮೆರಿಕ ನಿರ್ಧರಿಸಿವೆ.
ಭಾರತ ಸೇರಿದಂತೆ ಇತರ ಕಡೆಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿರುವ ಈ ಎರಡು ಉಗ್ರ ಸಂಘಟನೆಗಳ ವಿರುದ್ಧ ದಮನಕ್ಕೆ ಉಭಯ ದೇಶಗಳು ಮುಂದಾಗಿವೆ.
ಅಮೆರಿಕ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮಣ್ಯಂ ಜೈಶಂಕರ್ ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಸುಸಾನ್ ಇ ರೈಸ್ ಅವರು ಶ್ವೇತ ಭವನದಲ್ಲಿ ನಡೆದ ಸಭೆಯಲ್ಲಿ ಎಲ್ಇಟಿ, ಜೆಇಎಂ ವಿರುದ್ಧದ ಸಮರದಲ್ಲಿ ಪರಸ್ಪರ ಸಹಯೋಗ ಹೆಚ್ಚಿಸಿಕೊಳ್ಳುವ ಒಪ್ಪಂದಕ್ಕೆ ಬಂದರು.
2008ರ ಮುಂಬೈ ದಾಳಿಗೆ ಎಲ್ಇಟಿ ಕಾರಣವಾಗಿದ್ದರೆ, ಪಠಾಣ್ ಕೋಟ್ನ ಭಾರತೀಯ ವಾಯುನೆಲೆ ಮೇಲಿನ ದಾಳಿಗೆ ಜೆಇಎಂ ಕಾರಣ ಎಂದು ಆಪಾದಿಸಲಾಗಿದೆ.