ವಿದೇಶ

ಪಾಕಿಸ್ತಾನದ ಅಣ್ವಸ್ತ್ರಕ್ಕೂ ಬಂತು ಕುತ್ತು..?

Srinivasamurthy VN

ವಾಷಿಂಗ್ಟನ್‌: ಪಾಕಿಸ್ತಾನ ತನ್ನ ರಹಸ್ಯವಾಗಿ ತನ್ನ ಅಣ್ವಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವತ್ತ ದಾಪುಗಾಲಿಟ್ಟಿದ್ದರೆ, ಇತ್ತ ಆ ದೇಶದ ಅಣ್ವಸ್ತ್ರಗಳು ಸುರಕ್ಷಿತವಾಗಿಲ್ಲ ಎಂದು ಅಮೆರಿಕದ  ವರದಿಯೊಂದು ಹೇಳಿದೆ.

ಪಾಕಿಸ್ತಾನ ತನ್ನ ರಕ್ಷಣೆಗಾಗಿ ಅಣ್ವಸ್ತ್ರಗಳನ್ನು ಸಿದ್ದಪಡಿಸಿಕೊಂಡಿದೆಯಾದರೂ, ಅದರ ಅಣ್ವಸ್ತ್ರಗಳು ಹೆಚ್ಚಿನ ಸುರಕ್ಷತೆಯಲ್ಲಿ ಇಲ್ಲ ಎಂದು ಅಮೆರಿಕದ ವರದಿಯೊಂದು ಹೇಳಿದೆ. ಅಮೆರಿಕದ  ಪ್ರತಿಷ್ಠಿತ ಹಾರ್ವರ್ಡ್‌ ಕೆನಡಿ ಸ್ಕೂಲ್‌ ಈ ವರದಿಯನ್ನು ಸಿದ್ಧಪಡಿಸಿದ್ದು,  "ಅಣ್ವಸ್ತ್ರ ಭಯೋತ್ಪಾದನೆ ನಿಗ್ರಹ: ನಿರಂತರ ಸುಧಾರಣೆ ಅಥವಾ ಅಪಾಯಕಾರಿ ಇಳಿಮುಖ'' ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಸಿದ್ದಪಡಿಸಿ ಪಾಕಿಸ್ತಾನವನ್ನು ಎಚ್ಚರಿಸಿದೆ.

ಪಾಕಿಸ್ತಾನದ ಅಣ್ವಸ್ತ್ರ ಸಾಮರ್ಥ್ಯ ವೃದ್ಧಿಯ ಅಪಾಯಗಳು ತೀರ ಹೆಚ್ಚಿದ್ದು, ಅಲ್ಲಿನ ಸರ್ಕಾರ ವ್ಯೂಹಾತ್ಮಕ ಬಳಕೆಯ ಅಣ್ವಸ್ತ್ರಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಇವುಗಳ  ಕಳವು ಸಾಧ್ಯತೆಗಳ ಅಪಾಯ ಕೂಡ ಹೆಚ್ಚುತ್ತಿದೆ. ಪಾಕಿಸ್ಥಾನದಲ್ಲಿ ದೀರ್ಘಾವಧಿಯಲ್ಲಿ ಸರ್ಕಾರದ ಪತನ ಸಾಧ್ಯತೆಯೊಂದಿಗೆ ಭಯೋತ್ಪಾದಕರು ಆಡಳಿತ ಸೂತ್ರವನ್ನು ಕೈಗೆತ್ತಿಕೊಳ್ಳುವ  ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ ಈ ಪ್ರಕ್ರಿಯೆ ಕಿರು ಅವಧಿಯಲ್ಲಿ ಸಾಧ್ಯವಿಲ್ಲ ಎಂದು ಹೇಳಿರುವ ವರದಿ, ಅಣ್ವಸ್ತ್ರಗಳು ಉಗ್ರರ ಕೈವಶವಾಗುವ ಸಾಧ್ಯತೆಗಳನ್ನೂ ಕೂಡ ತಳ್ಳಿಹಾಕುವ  ಹಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಅಮೆರಿಕದಲ್ಲಿ ಈ ತಿಂಗಳಾಂತ್ಯದಲ್ಲಿ ಅಣ್ವಸ್ತ್ರ ಭದ್ರತಾ ಶೃಂಗ ಸಭೆ ನಡೆಯಲಿದ್ದು ಅದಕ್ಕೂ ಮೊದಲೇ ಪಾಕಿಸ್ತಾನ ಸರ್ಕಾರವನ್ನು ಎಚ್ಚರಿಸುವ ಈ ವರದಿ ಇದೀಗ ವಿಶ್ವ ಸಮುದಾಯದ  ಗಮನವನ್ನು ಸೆಳೆಯುತ್ತಿದೆ. ಪಾಕ್‌ ಅಣ್ವಸ್ತ್ರಗಳು ಅಲ್ಲಿನ ಉಗ್ರರ ಕೈವಶವಾಗುವ ಬಗ್ಗೆ ಅಮೆರಿಕದ ರಾಜತಾಂತ್ರಿಕರು ಶಂಕೆ ವ್ಯಕ್ತಪಡಿಸಿರುವ ಬೆನ್ನಲ್ಲೇ ಈಗ ಹಾರ್ವರ್ಡ್‌ ಕೆನಡಿ ಸ್ಕೂಲ್‌ ನ ಈ  ನೂತನ ವರದಿ ಪಾಕಿಸ್ತಾನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

SCROLL FOR NEXT