ವಾಷಿಂಗ್ಟನ್: ಲಾಹೋರ್ ನಲ್ಲಿ ಆತ್ಮಾಹುತಿ ದಾಳಿಯಾಗಿ 67 ಮಂದಿ ಸಾವನ್ನಪ್ಪಿದ್ದಾರೆ, 400 ಜನರು ಗಾಯಗೊಂಡಿದ್ದಾರೆ. ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸಲು ನಾನೊಬ್ಬ ಸಾಕು ಎಂದು ಅಮೆರಿಕ ಅದ್ಯಕ್ಷ ಸ್ಥಾನದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅವರು ಹೇಳಿಕೊಂಡಿದ್ದಾರೆ.
ಲಾಹೋರ್ ದಾಳಿ ಕುರಿತಂತೆ ನಿನ್ನೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬೇರೂರಿರುವ ಇಸಿಸ್ ಉಗ್ರರರು ಇದೀಗ ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ದಾರೆ. ಕ್ರಿಶ್ಚಿಯನ್ ಮಹಿಳೆಯರು ಹಾಗೂ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಆತ್ಮಾಹುತಿ ದಾಳಿ ಮಾಡಿದ್ದಾರೆ. ಇಂತಹ ಸಮಸ್ಯೆಗಳು ಬಗೆಹರಿಯಬೇಕಾದರೆ ನಾನೊಬ್ಬ ಸಾಕು ಎಂದು ಹೇಳಿಕೊಂಡಿದ್ದಾರೆ. ಟ್ರಂಪ್ ಅವರ ಈ ಹೇಳಿಕೆಗೆ ಹಲವು ಟೀಕೆಗಳು ವ್ಯಕ್ತವಾಗಿವೆ.
ಲಾಹೋರ್ ನ ಪ್ರಸಿತ್ಧ ತಾಣವೆಂದೇ ಹೇಳಲಾಗುವ ಇ-ಇಕ್ಬಾಲ್ ಪಾರ್ಕ್ ನಲ್ಲಿ ಪ್ರತೀ ನಿತ್ಯ ಹಲವು ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಜನನಿ ಬಿಡ ಪ್ರದೇಶಗಳನ್ನೇ ತಮ್ಮ ಗುರಿಯಾಗಿಸಿಕೊಳ್ಳುತ್ತಿರುವ ಉಗ್ರ ಸಂಘಟನೆಗಳು ನಿನ್ನೆ ಸಂಜೆ 6.30ರ ಸುಮಾರಿಗೆ ಆತ್ಮಾಹುತಿ ಬಾಂಬ್ ಸ್ಫೋಟಿಸಿತ್ತು. ಇದರ ಪರಿಣಾಮ ಸ್ಥಳದಲ್ಲಿದ್ದ 69ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 300 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ದಾಳಿಯ ಹೊಣೆಯನ್ನು ಇದೀಗ ತಾಲಿಬಾನ್ ಉಗ್ರ ಸಂಘಟನೆಯಾಗಿರುವ ಜಮಾತ್-ಉಲ್-ಅಹ್ರಾರ್ ಹೊತ್ತುಕೊಂಡಿದ್ದು, ನಮ್ಮ ಗುರಿ ಕ್ರಿಶ್ಚಿಯನ್ನರು, ನಾವು ಲಾಹೋರ್ ನಲ್ಲಿ ನೆಲೆಯೂರಿದ್ದೇವೆಂಬ ಸಂದೇಶವನ್ನು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರಿಗೆ ತಿಳಿಸುವ ಸಲುವಾಗಿ ಈ ದಾಳಿಯನ್ನು ಮಾಡಲಾಗಿದೆ ಎಂದು ತಾಲಿಬಾನ್ ಸಂಘಟನೆಯ ವಕ್ತಾರ ಎಹ್ಸಾನ್ಹುಲ್ಲಾ ಎಹ್ಸಾನ್ ಹೇಳಿದ್ದಾನೆ.
ಶರೀಫ್ ಅವರು ಏನನ್ನು ಬೇಕಾದರೂ ಮಾಡಿಕೊಳ್ಳಲಿ. ಆದರೆ, ನಮ್ಮನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಆತ್ಮಾಹುತಿ ಬಾಂಬ್ ದಾಳಿಕೋರರು ತಮ್ಮ ದಾಳಿಯನ್ನು ಮುಂದುವರೆಸಲಿದ್ದಾರೆ ಎಂದು ಹೇಳಿದ್ದಾನೆ.