ಇಸ್ಲಾಮಾಬಾದ್: ಲಾಹೋರ್ ನಲ್ಲಿ ಸಂಭವಿಸಿದ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರು ಇದೀಗ ತಮ್ಮ ಬ್ರಿಟನ್ ಪ್ರವಾಸವನ್ನು ರದ್ದು ಮಾಡಿರುವುದಾಗಿ ತಿಳಿದುಬಂದಿದೆ.
ಈ ಕುರಿತಂತೆ ಪಾಕಿಸ್ತಾನ ಪ್ರಧಾನಮಂತ್ರಿ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಶರೀಫ್ ಅವರ ಬ್ರಿಟನ್ ಪ್ರವಾಸ ಇಂದಿನಿಂದ ಆರಂಭವಾಗಬೇಕಿತ್ತು. ಆದರೆ, ಲಾಹೋರ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಪ್ರವಾಸವನ್ನು ರದ್ದು ಮಾಡಲಾಗಿದೆ ಎಂದು ಹೇಳಿಕೊಂಡಿದೆ.
ಪ್ರಧಾನಮಂತ್ರಿ ಡೇವಿಡ್ ಕ್ಯಾಮರೂನ್ ಅವರೊಂದಿಗೆ ಮಾತುಕತೆ ನಡೆಸುವ ಸಲುವಾಗಿ ಪ್ರಧಾನಿ ಶರೀಫ್ ಅವರು ಲಂಡನ್ ಭೇಟಿ ನೀಡಲಿದ್ದಾರೆ. ನಂತರ ಅಲ್ಲಿಂದ ನೇರವಾಗಿ ಅಮೆರಿಕದಲ್ಲಿ ನಡೆಯಲಿರುವ ಪರಮಾಣು ಭದ್ರತಾ ಶೃಂಗಸಭೆ 2016ಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಇದೀಗ ಶರೀಫ್ ಅವರ ಲಂಡನ್ ಪ್ರವಾಸವನ್ನು ರದ್ದು ಮಾಡಲಾಗಿದ್ದು, ಅಮೆರಿಕಗೆ ನೇರವಾಗಿ ಭೇಟಿ ನೀಡಲಿದ್ದಾರೆಂದು ಹೇಳಿದೆ.
ಲಾಹೋರ್ ನ ಪ್ರಸಿತ್ಧ ತಾಣವೆಂದೇ ಹೇಳಲಾಗುವ ಇ-ಇಕ್ಬಾಲ್ ಪಾರ್ಕ್ ನಲ್ಲಿ ಪ್ರತೀ ನಿತ್ಯ ಹಲವು ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಜನನಿ ಬಿಡ ಪ್ರದೇಶಗಳನ್ನೇ ತಮ್ಮ ಗುರಿಯಾಗಿಸಿಕೊಳ್ಳುತ್ತಿರುವ ಉಗ್ರ ಸಂಘಟನೆಗಳು ನಿನ್ನೆ ಸಂಜೆ 6.30ರ ಸುಮಾರಿಗೆ ಆತ್ಮಾಹುತಿ ಬಾಂಬ್ ಸ್ಫೋಟಿಸಿತ್ತು. ಇದರ ಪರಿಣಾಮ ಸ್ಥಳದಲ್ಲಿದ್ದ 70ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 300 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.