ಪಲ್ ಮೈರಾ: ಇಸಿಸ್ ಉಗ್ರರ ವಶದಲ್ಲಿದ್ದ ಸಿರಿಯಾದ ಪಾರಂಪರಿಕ ಪಲ್ ಮೈರಾ ಪಟ್ಟಣವನ್ನು ಸಿರಿಯಾ ಪಡೆ ಮರಳಿ ವಶಕ್ಕೆ ಪಡೆದುಕೊಂಡಿದೆ.
ಶನಿವಾರ ರಾತ್ರಿ ತೀವ್ರ ಕಾರ್ಯಾಚರಣೆ ಕೈಗೊಂಡ ರಷ್ಯಾ ನೇತೃತ್ವದ ಪಡೆಗಳು ಮಲ್ ಮೈರಾದ ಪಾರಂಪರಿಕ ತಾಣಗಳು ಮತ್ತು ವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಗ್ರರು ಮತ್ತು ಸೇನಾ ಪಡೆ ನಡುವೆ ನಡೆದ ಯುದ್ಧದಲ್ಲಿ 400 ಉಗ್ರರು ಹತರಾಗಿದ್ದಾರೆ.
ಅಷ್ಟೇ ಅಲ್ಲದೇ, ಪಲ್ ಮೈರಾ ಪಟ್ಟಣದ ಪಾರಂಪರಿಕ ತಾಣಗಳ ಸುತ್ತಮುತ್ತ ಉಗ್ರರು ನೆಲದಲ್ಲಿ ಹೂತಿಟ್ಟಿರುವ ಬಾಂಬ್ ಮತ್ತು ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯವನ್ನು ಸೇನಾ ಸಿಬ್ಬಂದಿ ಆರಂಭಿಸಿದ್ದಾರೆ.
ಪಲ್ ಮೈರಾದ ಹಲವು ಕಟ್ಟಡಗಳು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿವೆ. ಆದರೆ ಈ ಪೈಕಿ ಕೆಲವು ಕಟ್ಟಡಗಳನ್ನು ಇಸಿಸ್ ಉಗ್ರರು ನಾಶಪಡಿಸಿದ್ದಾರೆ. ಕಳೆದ ವರ್ಷ ಇಸಿಸ್ ಉಗ್ರರು ಈ ಪಟ್ಟಣವನ್ನು ವಶಕ್ಕೆ ಪಡೆದುಕೊಂಡಿದ್ದರು. ಒತ್ತೆಯಾಳುಗಳ ಶಿರಚ್ಛೇದಕ್ಕೆ ಇಲ್ಲಿನ ಪಾರಂಪರಿಕ ರಂಗಸ್ಥಳಗಳನ್ನು ಬಳಕೆ ಮಾಡುತ್ತಿದ್ದರು.
ಸೇನೆಯ ತಂತ್ರಗಾರಿಕೆಯಿಂದ ಪಲ್ ಮೈರಾವನ್ನು ಮರಳಿ ವಶಕ್ಕೆ ಪಡೆಯಲಾಗಿದೆ ಎಂದು ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸಾದ್ ಹೇಳಿದ್ದಾರೆ.