ವಾಶಿಂಗ್ಟನ್: ಅಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ ಅತಿ ದೊಡ್ಡ ಸಮಸ್ಯೆ ಎಂದಿದ್ದಾರೆ ಅಮೆರಿಕಾದ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್.
"ಅಣು ಶಸ್ತ್ರಾಸ್ತ್ರಗಳು ಎಂದು ಕರೆಯಲಾಗುವ ವಸ್ತುಗಳನ್ನು ಪಾಕಿಸ್ತಾನ ಹೊಂದಿರುವುದರಿಂದ, ಆ ದೇಶ ಅತಿ ದೊಡ್ಡ ತೊಂದರೆ. ಅವರು ಪರಿಸ್ಥಿತಿಯನ್ನು ತೆಕ್ಕೆಗೆ ತೆಗೆದುಕೊಳ್ಳಬೇಕು" ಎಂದು ತಮ್ಮ ಪ್ರಚಾರ ಸಮಯದಲ್ಲಿ ಸಿ ಎನ್ ಎನ್ ವಾಹಿನಿಗೆ ತಿಳಿಸಿದ್ದಾರೆ.
ಭಾನುವಾರ ಈಸ್ಟರ್ ದಿನದಂದು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ೭೪ ಜನ ಮತ್ತು ಗಾಯಗೊಂಡ ೩೦೦ ಜನರ ಕುರಿತು ಹೇಳಿದ ಟ್ರಂಪ್, ಅಂದು ಮೃತರಾದವರು ಹೆಚ್ಚಿನ ಜನ ಕ್ರಿಶ್ಚಿಯನ್ನರೆ, ಇದು ದುರಂತ ಕಥೆ" ಎಂದಿದ್ದಾರೆ.
"ನಾನು ತೀವ್ರಗಾಮಿ ಇಸ್ಲಾಮಿಕ್ ಭಯೋತ್ಪಾದನೆ ಬಗ್ಗೆ ಮಾತನಾಡುತ್ತಿದ್ದೇನೆ. ಬೇರೆ ಎಲ್ಲರಿಗಿಂತಲೂ ಉತ್ತಮವಾಗಿ ಇದನ್ನು ಪರಿಹರಿಸುತ್ತೇನೆ" ಎಂದು ಟ್ರಂಪ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಲಾಹೋರ್ ನಲ್ಲಿ ನಡೆದ ಈ ಆತ್ಮಹತ್ಯಾ ದಾಳಿಗೆ ತೆಹರಿಕ್-ಐ-ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಸಹ ಸಂಘಟನೆ ಜಮಾತುಲ್ ಅಹ್ರಾರ್ ಹೊಣೆ ಹೊತ್ತಿತ್ತು.