ವಾಷಿಂಗ್ ಟನ್: ವಿಶಿಷ್ಟ ಭಾಷಣ ಶೈಲಿಯಿಂದಲೇ ಸುದ್ದಿಯಲ್ಲಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕ ಎದುರಿಸುತ್ತಿರುವ ವ್ಯಾಪಾರ ಕೊರತೆಗೆ ಚೀನಾವನ್ನು ಹೊಣೆ ಮಾಡಿದ್ದು, ಚೀನಾ ಅಮೆರಿಕದ ಮೇಲೆ ಅತ್ಯಾಚಾರವೆಸಗುತ್ತಿದೆ ಎಂದು ಹೇಳಿದ್ದಾರೆ.
ಚೀನಾ ಅಮೆರಿಕಕ್ಕೆ ರಫ್ತು ಮಾಡುತ್ತಿರುವುದರ ಬಗ್ಗೆ ಮಾತನಾಡಿರುವ ಟ್ರಂಪ್, ಚೀನಾ ನಮ್ಮ ದೇಶದ ಮೇಲೆ ಅತ್ಯಾಚಾರವೆಸಗುವುದನ್ನು (ವ್ಯಾಪಾರ ವಹಿವಾಟುಗಳನ್ನು ಹೈಜಾಕ್ ಮಾಡುವುದು) ಮುಂದುವರೆಸಲು ಅವಕಾಶ ನೀಡುವಂತಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆಯೂ ಅನೇಕ ಬಾರಿ ಚೀನಾ ವಿರುದ್ಧ ಗುಡುಗಿದ್ದ ಟ್ರಂಪ್, ಜಾಗತಿಕ ಮಟ್ಟದಲ್ಲಿ ರಫ್ತು ಪ್ರಮಾಣ ಹೆಚ್ಚಿಸಿಕೊಳ್ಳಲು ಚೀನಾ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸಿದ್ದರ ಬಗ್ಗೆ ಕಿಡಿ ಕಾರಿದ್ದರು. ಅಷ್ಟೇ ಅಲ್ಲದೇ ಚೀನಾ ಅಮೆರಿಕಗೆ ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಭಾರಿ ಹೊಡೆತ ನೀಡುತ್ತಿದ್ದು ಅಮೆರಿಕವನ್ನು ಕೊಳ್ಳುತ್ತಿದೆ ಎಂದೂ ಆರೋಪಿಸಿದ್ದರು.
ವ್ಯಾಪಾರ ಕ್ಷೇತ್ರದಲ್ಲಿ ಅಮೆರಿಕ ವಿರುದ್ಧ ಚೀನಾ ಪ್ರಾಬಲ್ಯ ಮೆರೆಯುತ್ತಿರುವುದರ ಬಗ್ಗೆ ಮಾತನಾಡುತ್ತ, ಟ್ರಂಪ್ ಮೊದಲ ಬಾರಿಗೆ ಅತ್ಯಾಚಾರವೆಂಬ ಪದ ಬಳಕೆ ಮಾಡಿದ್ದಾರೆ. ಚೀನಾದ ವಿರುದ್ಧ ತಮಗೆ ಅಸಮಾಧಾನ ಇಲ್ಲ. ಆದರೆ ಅಮೆರಿಕಾದಲ್ಲಿರುವ ಅಸಮರ್ಥ ನಾಯಕರ ಬಗ್ಗೆ ಅಸಮಾಧಾನವಿದೆ ಎಂದು ಟ್ರಂಪ್ ಹೇಳಿದ್ದಾರೆ.