ಲಂಡನ್: ವಿಶ್ವದ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಸಿರಿಯಾ ಅಂಡ್ ಇರಾಕ್ (ಇಸಿಸ್) ತನ್ನ ದುಷ್ಕೃತ್ಯಕ್ಕಾಗಿ ಸ್ವಯಂಚಾಲಿತ ಕಾರನ್ನು ನಿರ್ಮಾಣ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿರುವಂತೆ, ಉಗ್ರ ಸಂಘಟನೆ ಇಸಿಸ್‌ನ ತಂತ್ರಜ್ಞರು ಗೂಗಲ್ ಮಾದರಿಯ ಚಾಲಕರಹಿತ ಕಾರಿನ ತಯಾರಿಕೆಯಲ್ಲಿ ತೊಡಗಿದ್ದು, ಜಿಪಿಎಸ್ ತಂತ್ರಜ್ಞಾನದ ಮೂಲಕ ಸ್ವಯಂಚಾಲಿತವಾಗಿ ಚಲಿಸುವ ಈ ಕಾರು, ವಿವಿಧ ರೀತಿಯ ಉಗ್ರ ಕೃತ್ಯಗಳಿಗೆ ಬಳಕೆಯಾಗಲಿದೆಯಂತೆ. ಈ ಬಗೆಯ ಕಾರುಗಳಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ತುಂಬಿ ಜನನಿಬಿಡ ಸ್ಥಳಗಳಿಗೆ ರವಾನಿಸಿ ಸ್ಫೋಟ ನಡೆಸುವುದು ಉಗ್ರ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ ಎಂದು ನ್ಯಾಟೋ ಪಡೆಯ ಭದ್ರತಾ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಇಸಿಸ್‌ನ ಈ ಕಾರ್ಯಕ್ಕೆ ಅದರ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಸಾಥ್ ನೀಡುತ್ತಿದ್ದು, ಗೂಗಲ್ ನಿರ್ಮಾಣ ಮಾಡಿರುವ ಸ್ವಯಂಚಾಲಿತ ಕಾರನ್ನು ಮಾದರಿಯಾಗಿಟ್ಟುಕೊಂಡು, ಇಸಿಸ್ ಕೂಡ ಸ್ವಯಂ ಚಾಲಿತ ಕಾರಿನ ಮಾದರಿ ತಾಂತ್ರಿಕ ಅಂಶಗಳನ್ನು ಕಲೆಹಾಕುತ್ತಿದೆ. ಉಗ್ರ ಸಂಘಟನೆಯ ಈ ಸಂಶೋಧನೆಗೆ ರಾಖಾದಲ್ಲಿರುವ ಮೂಲಭೂತವಾದಿ ವಿಶ್ವವಿದ್ಯಾಲಯ ಕೂಡ ಸಾಥ್ ನೀಡುತ್ತಿದೆ ಎಂದು ಹೇಳಲಾಗಿದೆ. ಜಿಪಿಎಸ್ ಬಳಸಿ ನಿರ್ದೇಶನ ಪಡೆದುಕೊಂಡು ಸಾಗುವ ಕಾರನ್ನು ಇಸಿಸ್ ತಯಾರಿಸಲಿದ್ದು, ಸ್ಪೋಟಕ್ಕೆ ಆತ್ಮಾಹುತಿ ಬಾಂಬರ್ ಬಳಸುವ ಬದಲು ಈ ರೀತಿ ಕಾರು ಬಳಸಿದರೆ ಅದರಿಂದ ಐಸಿಸ್ ಸದಸ್ಯರಿಗೂ ಅನುಕೂಲವಾಗಲಿದೆ ಎಂದು ಉಗ್ರ ಮುಖಂಡರು ಚಿಂತಿಸಿದ್ದಾರೆ.
ಇನ್ನು ಇಸಿಸ್ ನ ಈ ನಡೆಗೆ ಈಗಾಗಲೇ ಸಂಘಟನೆ ವಿರುದ್ಧ ಹಲವು ರಾಷ್ಟ್ರಗಳು ಯುದ್ಧ ಸಾರಿರುವುದೂ ಕೂಡ ಈ ರೀತಿಯ ಪರ್ಯಾಯ ಮಾರ್ಗಗಳ ಮೊರೆ ಹೋಗುತ್ತಿರುವುದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.