ಲಾಹೋರ್: ಅಂಗಡಿಯೊಂದರಿಂದ ಕಲ್ಲಂಗಡಿ ಹಣ್ಣು ಕದ್ದರು ಎಂಬ ಆರೋಪ ಹೊರಿಸಿ ಇಬ್ಬರು ಪುಟ್ಟ ಮಕ್ಕಳನ್ನು ಮನಸೋ ಇಚ್ಛೆ ಥಳಿಸಿ, ನಗ್ನವಾಗಿ ಪರೇಡ್ ಮಾಡಿದ ಘಟನ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನದ ಲಾಹೋರ್ ಮಾರುಕಟ್ಟೆಯಲ್ಲಿ ಈ ಘಟನೆ ಸಂಭವಿಸಿದ್ದು, ಬಿಸಿಲ ಝಳ ತಾಳಲಾರದ ಇಬ್ಬರು ಪುಟ್ಟ ಮಕ್ಕಳು ಕಲ್ಲಂಗಡಿಗೆ ಕೈಹಾಕಿದ್ದರಿಂದ ಆಕ್ರೋಶಗೊಂಡ ಅಂಗಡಿ ಮಾಲೀಕರಾದ ಬಷರತ್ ಮತ್ತು ಇರ್ಫಾನ್ ಇಬ್ಬರು ಪುಟ್ಟ ಮಕ್ಕಳನ್ನು ಮನಸೋ ಇಚ್ಛೆ ಥಳಿಸಿದ್ದಾನೆ. ಅಲ್ಲದೆ ಮಕ್ಕಳ ಬಟ್ಟೆ ಬಿಚ್ಚಿಸಿ, ಮಾರುಕಟ್ಟೆ ಪೂರ್ತಿ ಪರೇಡ್ ಮಾಡಿಸಿ ಅಸಭ್ಯವಾಗಿ ನಿಂದಿಸಿದ್ದಷ್ಟೇ ಮಕ್ಕಳ ನಗ್ನ ಪರೇಡ್ ನ ವಿಡಿಯೋ ಕೂಡ ಮಾಡಿದ್ದಾನೆ.
ಈ ಬಗ್ಗೆ ಮಕ್ಕಳ ತಂದೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಅಂಗಡಿ ಮಾಲೀಕರಿಂದ ಮಕ್ಕಳನ್ನು ಬಿಡಿಸಿದ್ದು, ಕೂಡಲೇ ಮಾಲೀಕರಾದ ಬಷರತ್ ಮತ್ತು ಇರ್ಫಾನ್ ಎಂಬುವವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಫಿರೋಜ್ ಅವರು, ಪ್ರಸ್ತುತ ಅಂಗಡಿ ಮಾಲೀಕರನ್ನು ಬಂಧಿಸಿದ್ದು, ಸೋಮವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ. ಮಕ್ಕಳ ನಗ್ನ ವಿಡಿಯೋ ಮಾಡಿದ್ದ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.