ವಿದೇಶ

ಸ್ವಾಮಿ ನಾರಾಯಣ ಮಂದಿರಕ್ಕೆ ಲಂಡನ್ ನ ಮೊದಲ ಮುಸ್ಲಿಂ ಮೇಯರ್ ಭೇಟಿಯ ಚಿತ್ರ ವೈರಲ್

Lingaraj Badiger
ಲಂಡನ್: ಪಾಕಿಸ್ತಾನದ ಬಸ್ ಚಾಲಕನ ಮಗನಾದ ಸಾದಿಕ್ ಖಾನ್ ಲಂಡನ್ ನಗರದ ಮೊದಲ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾಗಿರುವುದು ಹಳೆಯ ಸುದ್ದಿ. ಆದರೆ ಅವರು ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಅಚ್ಚುಮೆಚ್ಚಿನ ದೇವಾಲಯ ನಿಯಾಸ್​ಡೆನ್​ನಲ್ಲಿರುವ ಶ್ರೀ ಸ್ವಾಮಿ ನಾರಾಯಣ ಮಂದಿರಕ್ಕೆ ಭೇಟಿ ನೀಡಿರುವ ಚಿತ್ರ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಸಾದಿಕ್ ಅವರು ಇಂದು ಸ್ವಾಮಿ ನಾರಾಯಣ ದೇವಾಲಯಕ್ಕೆ ಭೇಟಿ ನೀಡಿ, ಹಿಂದೂ ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳನ್ನು ಪೂರೈಸುವ ಮೂಲಕ ತಮ್ಮ ಕಾರ್ಯ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳ ಬಳಿ ಕುಶಲೋಪರಿ ವಿಚಾರಿಸಿದ್ದಾರೆ. 
ಹಿಂದೂ ದೇವಾಲಯ ಭೇಟಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿರುವ ಸಾದಿಕ್ ಅವರು, ನನ್ನ ನೆಚ್ಚಿನ ದೇವಾಲಯಕ್ಕೆ ವಾರಾಂತ್ಯದಲ್ಲಿ ಭೇಟಿ ನೀಡಿರುವುದು ಮನಸ್ಸಿಗೆ ಅತೀವ ಆನಂದ ನೀಡಿದೆ. ಲಂಡನ್ ಭಾರತೀಯರ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿ, ಭಾರತದೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಿಷ್ಠಗೊಳಿಸುವುದು ನನ್ನ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಭಾರತದೊಂದಿಗಿನ ವ್ಯಾಪಾರ ವಹಿವಾಟು ಅಧಿಕವಾಗಿಲಿದೆ ಎಂದು ಹೇಳಿದ್ದಾರೆ.
ಮೇಯರ್ ಆಗಿ ನನ್ನ ಮೊದಲ ಆದ್ಯತೆ ಲಂಡನ್ ಜನತೆಗೆ ಸೂಕ್ತವಾದ ಭದ್ರತೆ ಒದಗಿಸುವುದು ಹಾಗೂ ಭಯೋತ್ಪಾದನೆ ಚಟುವಟಿಕೆಗಳನ್ನು ನಿರ್ಮೂಲನೆ ಮಾಡುವುದಾಗಿದೆ. ಹಾಗೇ ನಗರದಲ್ಲಿನ ಉದ್ಯಮಗಳ ಬೆಳವಣಿಗೆ ಜತೆಗೆ ಸಂಶೋಧನೆಗಳಿಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
SCROLL FOR NEXT