ಬೀಜಿಂಗ್: ಭಾರತ ಮತ್ತು ಚೀನಾ ನಡುವಿನ ಸಮಸ್ಯೆಗಳ ಪರಿಹಾರಕ್ಕಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 8 ಸೂತ್ರಗಳ ಪಟ್ಟಿ ಮಾಡಿದ್ದಾರೆ.
ಭಾರತ- ಚೀನಾ ಗಡಿ ವಿವಾದ ಸೇರಿದಂತೆ ಉಭಯ ರಾಷ್ಟ್ರಗಳ ನಡುವಣ ಸವಾಲುಗಳನ್ನು ರಾಜಕೀಯ ಕುಶಾಗ್ರಮತಿ ಹಾಗೂ ಪೌರ ವಿವೇಚನೆ ಮೂಲಕ ಸಮಗ್ರವಾಗಿ ಇತ್ಯರ್ಥ ಪಡಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಬೀಜಿಂಗ್ ನ ಪೆಕಿಂಗ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಿದ ಪ್ರಣಬ್ ಮುಖರ್ಜಿ ಅವರು, ಪರಸ್ಪರ ಪಾಲುದಾರಿಕೆಗೆ ಉಭಯ ರಾಷ್ಟ್ರಗಳು ಬದ್ಧವಾಗಿರಬೇಕು. ಅಭಿವೃದ್ಧಿ ಪಾಲುದಾರಿಕೆ ಸಾಧ್ಯವಾಗಲು ರಾಜಕೀಯ ತಿಳುವಳಿಕೆ ಅತ್ಯಂತ ಅಗತ್ಯ ಎಂದ ಅವರು, ರಾಜಕೀಯ ಸಂಪರ್ಕವನ್ನು ವಿಸ್ತರಿಸುವುದು ಪರಸ್ಪರ ಸಹಕಾರ ವಿಸ್ತರಣೆಗೆ ಒಂದು ಮಾರ್ಗ ಎಂದು ತಿಳಿಸಿದ್ದಾರೆ.
ಚೀನಾ ಮತ್ತು ಭಾರತದ ಪಾಲುದಾರಿಕೆಯನ್ನು ಬಲಪಡಿಸಲು ನಾವು ಬದ್ಧವಾಗಿದ್ದೇವೆ. ನೆರೆ ದೇಶಗಳೊಂದಿಗೆ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಭಿನ್ನಭಿಪ್ರಾಯಗಳು ಮೂಡುತ್ತಿರುತ್ತವೆ. ಆದರೆ ಅದನ್ನು ಬಗೆಹರಿಸಿಕೊಳ್ಳಬೇಕು. ಹಳೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದೇ, ಮುಂದಿನ ಪೀಳಿಗೆಗಳಿಗೆ ಅದೇ ಸಮಸ್ಯೆಗಳನ್ನು ಬಿಡುವುದು ಸರಿಯಲ್ಲ. ಈ ಸಮಸ್ಯೆಗಳನ್ನು ಇಲ್ಲಿಗೆ ಬಗೆಹರಿಸಿಕೊಂಡು ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ನೋಡಿಕೊಳ್ಳುವುದಕ್ಕಾಗಿ ಉಭಯ ದೇಶಗಳು ದುಡಿಯಬೇಕಿದೆ. ಎರಡು ದೇಶಗಳ ಬಾಂಧವ್ಯ ಹದಗೆಟ್ಟಿಲ್ಲ ಎಂಬ ನಂಬಿಕೆ ಇದೆ. ವ್ಯತ್ಯಾಸಗಳನ್ನ ಕಡಿಮೆ ಮಾಡಿಕೊಂಡು ಒಮ್ಮುಖವಾಗಿ ಮುನ್ನುಗ್ಗೋಣ ಎಂದು ಅವರು ತಿಳಿಸಿದ್ದಾರೆ.
ಇನ್ನು ಉಭಯ ದೇಶಗಳ ಯುವಕರು ಸಂಪರ್ಕ ಬೆಳೆಸಿಕೊಳ್ಳುವಂತೆ ನಾವು ಅನುವು ಮಾಡಿಕೊಡಬೇಕಿದೆ. ಉತ್ಸವಗಳು, ಕ್ರೀಡೆಗಳು, ಡಿಜಿಟಲ್ ಟೆಕ್ನಾಲಜಿ, ಬೌದ್ಧಿಕ ಮತ್ತು ಸಾಂಸ್ಕೃತಿಕ ವಿನಿಮಯ, ಹಾಗೂ ಪ್ರವಾಸ, ಪ್ರಮುಖವಾಗಿ ಕೈಲಾಶ ಮಾನಸ ಸರೋವರ ಮತ್ತು ಬುದ್ಧರ ಯಾತ್ರೆ ಕೇಂದ್ರಗಳಲ್ಲಿ ಸಂಪರ್ಕವನ್ನು ವೃದ್ಧಿಗೊಳಿಸಲು ಅನುವು ಮಾಡಿಕೊಡಬೇಕಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics