ರಿಯೋ ಡಿ ಜನೈರೋ: ಹದಿನಾರರ ಹರೆಯದ ಬಾಲಕಿಗೆ ಬಲವಂತವಾಗಿ ಮಾದಕ ದ್ರವ್ಯ ತಿನ್ನಿಸಿ ಆಕೆಯನ್ನು ನಗ್ನವಾಗಿ ಮಲಗಿಸಿ 30ಕ್ಕೂ ಅಧಿಕ ಕಾಮಾಂಧರು ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ತಮ್ಮ ಪೈಶಾಚಿಕ ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಆಘಾತಕಾರಿ ಘಟನೆ ಬ್ರೆಜಿಲ್ ನ ರಿಯೋ ಡಿ ಜನೈರೋ ದಲ್ಲಿ ನಡೆದಿದ್ದು ಅಲ್ಲಿನ ಮಹಿಳೆಯರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.
ಈ ಘಟನೆ ಮೇ 21ರಂದು ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಸಂತ್ರಸ್ತೆಗೆ ನ್ಯಾಯ ಕೊಡಿಸುವುದಾಗಿ ಬ್ರೆಜಿಲ್ ನ ಕಾನೂನು ಸಚಿವ ಅಲೆಕ್ಸಾಂಡರ್ ಡಿ ಮೊರೈಸ್ ಸುದ್ದಿಗೋಷ್ಟಿಯಲ್ಲಿ ಭರವಸೆ ನೀಡಿದ್ದಾರೆ. ತನಿಖೆಯನ್ನು ಮುಂದುವರಿಸಿದ್ದಾರೆ.
ಬ್ರೆಜಿಲ್ ನ ಹಂಗಾಮಿ ಅಧ್ಯಕ್ಷ ಮೈಕೆಲ್ ಟೆಮರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ 21ನೇ ಶತಮಾನದಲ್ಲಿ ಕೂಡ ನಾವು ಇಂತಹ ಭೀಕರ ಕೃತ್ಯದ ನಡುವೆ ಬದುಕಬೇಕಾದ ಪರಿಸ್ಥಿತಿಯಿದೆ. ರಿಯೋ ಡಿ ಜನೈರೋದಲ್ಲಿ ನಡೆದ ಈ ಕೃತ್ಯದ ಬಗ್ಗೆ ತೀವ್ರವಾಗಿ ಖಂಡಿಸುತ್ತೇನೆ ಎಂದು ಮೈಕೆಲ್ ಟ್ವಿಟ್ಟರ್ ನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಗ್ಯಾಂಗ್ ರೇಪ್‌ಗೆ ಒಳಗಾದ ಬಾಲಕಿಯು ಹಾಸಿಗೆಯಲ್ಲಿ ನಗ್ನಳಾಗಿ ಬಿದ್ದಿರುವುದು ಮತ್ತು ಕಾಮಾಂಧನೋರ್ವ " ಈ ಬಾಲಕಿಯನ್ನು 30ಕ್ಕೂ ಹೆಚ್ಚಿನ ನನ್ನ ಸಂಗಾತಿಗಳು ರೇಪ್ ಮಾಡಿದ್ದಾರೆ' ಎಂದು ಅಟ್ಟಹಾಸ ಮೆರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಕಳೆದ ವಾರ ವೈರಲ್ ಆಗಿತ್ತು. ಈ ಆಘಾತಕಾರಿ ವಿಡಿಯೋ ವೀಕ್ಷಿಸಿದ ಸಾಮಾಜಿಕ ಜಾಲ ತಾಣ ಬಳಕೆದಾರರಲ್ಲಿ ಇದುತೀವ್ರವಾದ ಆಕ್ರೋಶ, ಜುಗುಪ್ಸೆ, ಹತಾಶೆ, ಭೀತಿಯನ್ನು ಹುಟ್ಟಿಸಿತ್ತು. ಇದಕ್ಕೆ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದವು.
ಈ ವರ್ಷ ಆಗಸ್ಟ್‌ನಲ್ಲಿ ಇಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದ್ದು ಈ ಬಗೆಯ ಅಘಾತಕಾರಿ ಘಟನೆಯಿಂದ ಜನರಲ್ಲಿ ಭೀತಿ ಉಂಟಾಗಿದೆ.
ಸಾಮೂಹಿಕ ಅತ್ಯಾಚಾರ ವಿಡಿಯೋದಲ್ಲಿ ಗುರುತಿಸಲ್ಪಟ್ಟಿರುವ ನಾಲ್ವರು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ. ಸಾಮಾಜಿಕ ಜಾಲ ತಾಣದಲ್ಲಿ ಈ ಅತ್ಯಾಚಾರ ವಿಡಿಯೋ ಹಾಕಿದವರಿಗಾಗಿಯೂ ಹುಡುಕಾಟ ನಡೆದಿದೆ ಎಂದು ಪೊಲೀಸ್ ಮುಖ್ಯಸ್ಥ ಫರ್ನಾಂಡೋ ವೆಲೊಸೋ ಹೇಳಿದ್ದಾರೆ.