ಭೂಕಂಪ ಕಾಣಿಸಿಕೊಂಡ ಪ್ರದೇಶವನ್ನು ಭೂಪಟದಲ್ಲಿ ಸೂಚಿಸಿರುವುದು
ಟೋಕಿಯೊ: ಈಶಾನ್ಯ ಜಪಾನ್ ನ ತೀರ ಭಾಗದ ಫುಕುಶಿಮಾ ಪರಮಾಣು ಘಟಕದಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಭೂಕಂಪ ಉಂಟಾಗಿದ್ದು ಇದರ ಪರಿಣಾಮವಾಗಿ ಸುನಾಮಿ ಅಪ್ಪಳಿಸಿದೆ.2011ರಲ್ಲಿ ಭಾರೀ ಭೂಕಂಪ ಮತ್ತು ಸುನಾಮಿ ಕಾಣಿಸಿಕೊಂಡ ಪ್ರದೇಶದಲ್ಲಿಯೇ ಇಂದು ಕೂಡ ಪ್ರಕೃತಿ ವಿಕೋಪ ಕಾಣಿಸಿಕೊಂಡಿರುವುದು ವಿಶೇಷ.
ಭಾರತೀಯ ಕಾಲಮಾನ ಇಂದು ಬೆಳಗ್ಗೆ 6.38ರ ಹೊತ್ತಿಗೆ ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ 10 ಕಿಲೋ ಮೀಟರ್ ಆಳದಲ್ಲಿ ಪ್ರಬಲ ಭೂಕಂಪ ಕಾಣಿಸಿಕೊಂಡಿತು ನಂತರ 1 ಮೀಟರ್ ಎತ್ತರದವರೆಗೆ ಅಲೆ ತೀರ ಪ್ರದೇಶಕ್ಕೆ ಅಪ್ಪಳಿಸಿತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿರುವುದಾಗಿ ರಾಷ್ಟ್ರೀಯ ಸುದ್ದಿ ವಾಹಿನಿ ಎನ್ ಎಚ್ ಕೆ ಪ್ರಸಾರ ಮಾಡಿದೆ.
ಭೂಕಂಪದಿಂದ ಯಾವುದೇ ಭೀಕರ ತೊಂದರೆ, ಸಾವು, ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಟೆಪ್ಕೊ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
4.5 ಮೀಟರ್ ಎತ್ತರದವರೆಗೆ ಸುನಾಮಿ ಫುಕುಶಿಮಾದ ಉತ್ತರಕ್ಕೆ ಸೆಂದೈ ಸುತ್ತಮುತ್ತ ಅಪ್ಪಳಿಸಿದೆ.ರಾಷ್ಟ್ರೀಯ ಪ್ರಸಾರವಾಹಿನಿ ಎನ್ ಎಚ್ ಕೆ ಸುತ್ತಮುತ್ತಲ ತೀರದ ನಿವಾಸಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದೆ.
2011 ಮಾರ್ಚ್ ತಿಂಗಳಿನಲ್ಲಿ ಇದೇ ಪ್ರದೇಶದಲ್ಲಿ ರಿಕ್ಟರ್ ನಲ್ಲಿ 7.4 ತೀವ್ರತೆಯ ಭೂಕಂಪ ಉಂಟಾಗಿ ನಂತರ ಸುನಾಮಿ ಕಾಣಿಸಿಕೊಂಡು 18,500 ಮಂದಿ ಮೃತಪಟ್ಟಿದ್ದು ಮತ್ತು ಕಣ್ಮರೆಯಾದದ್ದನ್ನು ಇಲ್ಲಿ ಸ್ಮರಿಸಬಹುದು. ಆ ಸಮಯದಲ್ಲಿ ಜಪಾನ್ ನ ಫುಕುಶಿಮಾ ದೈಚಿ ಪರಮಾಣು ಘಟಕದ ರಿಯಾಕ್ಟರ್ ಗೆ ಭಾರೀ ಹೊಡೆತ ಬಿದ್ದಿತ್ತು.
ಐದು ವರ್ಷಗಳ ಹಿಂದೆ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯಿಂದ ಫುಕುಶಿಮಾ ಪರಮಾಣು ಘಟಕ ನಾಶವಾಗಿತ್ತು.
ತೀರದಲ್ಲಿದ್ದ ಕಾರುಗಳನ್ನು ಇಂದು ಮುಂಜಾವಿನ ಹೊತ್ತು ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು ಅಧಿಕಾರಿಗಳು ಸುನಾಮಿ ಸಂಭವಿಸುವ ಮುನ್ನೆಚ್ಚರಿಕೆ ನೀಡಿದ್ದಾರೆ. ಸಮುದ್ರದಿಂದ ಹಡಗುಗಳು ಕೂಡ ತೀರಕ್ಕೆ ಬಂದಿವೆ.
ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ. ಭೂಕಂಪದಿಂದ ಟೊಕ್ಯೊದಲ್ಲಿನ ಕಟ್ಟಡಗಳು ಅಲುಗಾಡಿವೆ ಎಂದು ಎನ್ಎಚ್ ಕೆ ಸುದ್ದಿವಾಹಿನಿ ವರದಿ ಮಾಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos