ಇಸ್ಲಾಮಾಬಾದ್: ಬಲೋಚ್ ರಾಷ್ಟ್ರೀಯ ನಾಯಕ ನವಾಬ್ ಅಕ್ಬರ್ ಖಾನ್ ಭುಕ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲೋಚಿಸ್ತಾನ ಹೈಕೋರ್ಟ್ ಸೋಮವಾರ ಪಾಕಿಸ್ತಾನ ಮಾಜಿ ಅಧ್ಯಕ್ಷ ಜನರಲ್ ಫರ್ವೇಜ್ ಮುಷರ್ರಫ್ ಅವರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದೆ.
2006ರಲ್ಲಿ ನಡೆದ ಭುಕ್ತಿ ಕೊಲೆ ಪ್ರಕರಣದಲ್ಲಿ ಉಗ್ರ ನಿಗ್ರಹ ಕೋರ್ಟ್ ನಿಂದ ಖುಲಾಸೆಗೊಂಡಿದ್ದ 73 ವರ್ಷದ ಪಾಕ್ ಮಾಜಿ ಅಧ್ಯಕ್ಷರ ವಿರುದ್ಧದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಮುಷರ್ರಫ್ ವಿರುದ್ಧ ಬಂಧನ ವಾರಂಟ್ ಹೊರಡಿಸಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಮುಷರ್ರಫ್ ಪರ ವಾದ ಮಂಡಿಸಿದ ಅಖ್ತರ್ ಶಾಹ್, ನನ್ನ ಕಕ್ಷಿದಾರರು ಕೋರ್ಟ್ ಆದೇಶವನ್ನು ಗೌವರಿಸುತ್ತಾರೆ. ಆದರೆ ಭದ್ರತೆಯ ಕಾರಣಗಳಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಅಕ್ಬರ್ ಭುಕ್ತಿ ಅವರ ಪುತ್ರ ನವಾಬ್ಜದ ಜಮಾಲಿ ಭುಕ್ತಿ ಅವರು ಉಗ್ರ ನಿಗ್ರಹ ಕೋರ್ಟ್ ತೀರ್ಪು ಪ್ರಶ್ಮಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.