ಹೇಗ್ ನಗರದಲ್ಲಿರುವ ಅಂತರಾಷ್ಟ್ರೀಯ ಕೋರ್ಟ್
ವಿಶ್ವಸಂಸ್ಥೆ: ಪರಮಾಣು ಪೈಪೋಟಿ ತಡೆಯುವಲ್ಲಿ ಭಾರತ ವಿಫಲವಾಗಿದೆ ಎಂದು ಆರೋಪಿಸಿ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಮಾರ್ಷಲ್ ದ್ವೀಪರಾಷ್ಟ್ರ ದಾಖಲಿಸಿದ್ದ ಕೇಸ್ ಅನ್ನು ವಿಶ್ವಸಂಸ್ಥೆಯ ಉನ್ನತ ನ್ಯಾಯಾಧೀಕರಣ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಐಸಿಜೆ) ಬುಧವಾರ ತಳ್ಳಿ ಹಾಕಿದೆ.
16 ನ್ಯಾಯಾಧೀಶರನ್ನೊಳಗೊಂಡ ಐಸಿಜೆ ಪೀಠದ ಅಧ್ಯಕ್ಷ ರೋನ್ನಿ ಅಬ್ರಹಾಂ ಅವರು, ಜಾಗತಿಕ ಅಣ್ವಸ್ತ್ರಗಳ ಬೆದರಿಕೆ ಹಿನ್ನೆಲೆಯಲ್ಲಿ ದ್ವೀಪರಾಷ್ಟ್ರ ದಾಖಲಿಸಿದ್ದ ಪ್ರಕರಣವನ್ನು ತಿರಸ್ಕರಿಸಿದ್ದು, ‘ನಾವು ವ್ಯಾಪ್ತಿಗೆ ಸಂಬಂಧಿಸಿದಂತೆ ಭಾರತವು ಎತ್ತಿರುವ ಆಕ್ಷೇಪವನ್ನು ಎತ್ತಿ ಹಿಡಿಯುತ್ತೇವೆ ಮತ್ತು ಪ್ರಕರಣದ ಅರ್ಹತೆ ಬಗ್ಗೆ ಮುಂದುವರೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ರಾಷ್ಟ್ರಗಳ ನಡುವಣ ವಿವಾದಗಳ ಇತ್ಯರ್ಥಕ್ಕಾಗಿ ರಚಿಸಲಾಗಿರುವ ಟ್ರಿಬ್ಯೂನಲ್ ಭಾರತ ಮತ್ತು ಮಾರ್ಷಲ್ ದ್ವೀಪಗಳ ಮಧ್ಯೆ ಯಾವುದೇ ವಿವಾದಗಳು ಇದ್ದ ಬಗ್ಗೆ ಅಥವಾ ಪರಮಾಣು ವಿಷಯಕ್ಕೆ ಸಂಬಂಧಿಸಿದ ವಿವಾದ, ಸಂಧಾನ ಯತ್ನಗಳು ನಡೆದ ಬಗ್ಗೆ ದಾಖಲೆಗಳಿಲ್ಲ ಮತ್ತು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉನ್ನತ ಕೋರ್ಟ್ ಸ್ಪಷ್ಟಪಡಿಸಿದೆ,
ಈ ಹಿಂದೆ ಇದೇ ರೀತಿ ಇತರ ದೇಶಗಳ ವಿರುದ್ಧ ಹೂಡಲಾಗಿದ್ದ ಇಂತಹ ದಾವೆಗಳನ್ನೂ ನ್ಯಾಯಾಲಯ ವ್ಯಾಪ್ತಿ ಪ್ರಶ್ನೆಯ ಹಿನ್ನೆಲೆಯಲ್ಲಿ ತಳ್ಳಿ ಹಾಕಿತ್ತು.