ಮಾಸ್ಕೊ: ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ತಂತ್ರಜ್ಞಾನಗಳನ್ನು ಭಾರತ ದೇಶಕ್ಕೆ ಪೂರೈಸುವಲ್ಲಿ ರಷ್ಯಾ ಮುಂಚೂಣಿಯಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಭಾರತ, ರಷ್ಯಾದ ವಿಶೇಷ ಕಾರ್ಯತಂತ್ರ ಪಾಲುದಾರ ಆಗಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ದೇಶ ಸೇನಾ ತಾಂತ್ರಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಸಹಭಾಗಿತ್ವ ಹೊಂದುತ್ತದೆ. ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಸಾಧನಗಳನ್ನು ನೇರವಾಗಿ ಪೂರೈಸುವಲ್ಲಿ ಮತ್ತು ಭಾರತದೊಂದಿಗೆ ಜಂಟಿ ಸಂಶೋಧನೆ ನಡೆಸುವಲ್ಲಿ, ಮಿಲಿಟರಿ ಉದ್ದೇಶಗಳಿಗಾಗಿ ಸರಕುಗಳನ್ನು ಉತ್ಪಾದಿಸುವಲ್ಲಿ ರಷ್ಯಾ ಮುಂಚೂಣಿಯಲ್ಲಿದೆ ಎಂದು ಪುಟಿನ್ ಅವರು ಐಎಎನ್ಎಸ್ ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಅವರು ಈ ವಾರಾಂತ್ಯ ಗೋವಾದಲ್ಲಿ ನಡೆಯಲಿರುವ ಐದು ದೇಶಗಳ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಲಿದ್ದಾರೆ.
ಬ್ರಹ್ಮೋಸ್ ಸೂಪರ್ಸಾನಿಕ್ ಯುದ್ಧ ಕ್ಷಿಪಣಿ ಮತ್ತು ಹೊಸ ಐದನೇ ತಲೆಮಾರಿನ ಯುದ್ಧ ವಿಮಾನದ ನಿರ್ಮಾಣ ಮತ್ತು ಅಭಿವೃದ್ಧಿ ಎರಡೂ ದೇಶಗಳ ನಡುವಣ ಯಶಸ್ವಿ ಜಂಟಿ ಕಾರ್ಯಾಚರಣೆಯಾಗಿವೆ ಎಂದರು.
ಭಾರತದಲ್ಲಿ ರಷ್ಯಾದ ಹಲವು ಯೋಜನೆಗಳು ಕೇವಲ ವಾಣಿಜ್ಯ ಪ್ರಾಮುಖ್ಯತೆಯನ್ನು ಪಡೆದಿರುವುದಲ್ಲದೆ ಎರಡೂ ದೇಶಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಇಂತಹ ಯೋಜನೆಗಳು ಭಾರತದ ಹೊಸ ಕೈಗಾರಿಕೀಕರಣ ಯೋಜನೆಗಳಲ್ಲಿ ಸೌಹಾರ್ದಯುತವಾಗಿ ಹೊಂದಿಕೆಯಾಗುತ್ತದೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಪುಟಿನ್ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.
ರಷ್ಯಾದ ಕಂಪೆನಿಗಳು ಭಾರತೀಯ ಕಂಪೆನಿಗಳ ನಿಜವಾದ ಭವಿಷ್ಯ ಮತ್ತು ಆಕರ್ಷಣೆಯನ್ನು ನೋಡುತ್ತವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics