ಬಾಗ್ಧಾದ್: ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟಯ ಹಿಡಿತದಲ್ಲಿರುವ ಇರಾಕ್ ನಗರ ಮೊಸುಲ್ ನನ್ನ ವಶಪಡಿಸಿಕೊಳ್ಳುವ ಇರಾಕಿ ಪಡೆಗಳ ಕಾರ್ಯಾಚರಣೆ ಪ್ರಾರಂಭವಾಗಿದೆ.
ಇದನ್ನು ಘೋಷಣೆ ಮಾಡಿರುವ ಇರಾಕ್ ಪ್ರಧಾನಿ 'ಹೈದರ್ ಆಲ್-ಅಬಾದಿ' "ಗೆಲುವಿನ ಘಂಟೆ ಮೊಳಗಿಸಲಾಗಿದೆ" ಐತಿಹಾಸಿಕ ನಗರವನ್ನು ಮರುವಶಪಡಿಸಿಕೊಂಡು "ದೌರ್ಜನ್ಯ ಮತ್ತು ಭಯೋತ್ಪಾದನೆಯಿಂದ ನರಳಿರುವ" ಒಂದು ದಶಲಕ್ಷ ಜನರನ್ನು ಸ್ವತಂತ್ರಗೊಳಿಸಲು ದೈತ್ಯ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದಿದ್ದಾರೆ.
"ಐ ಎಸ್ ನಿಂದ ನಿಮ್ಮನ್ನು ಸ್ವತಂತ್ರಗೊಳಿಸಲು ಕಾರ್ಯಾಚರಣೆ ಪ್ರಾರಂಭವಾಗಿದೆ ಎಂದು ಇಂದು ಘೋಷಿಸುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.
"ದೇವರ ಇಚ್ಛೆಯಂತೆ ಐ ಎಸ್ ನಿಂದ ನಿಮ್ಮ ಬಿಡುಗಡೆಯನ್ನು ಸಂಭ್ರಮಿಸಲು ನಾವು ಮೊಸುಲ್ ನಲ್ಲಿ ಭೇಟಿ ಮಾಡಲಿದ್ದೇವೆ. ಮತ್ತೆ ನಾವೆಲ್ಲಾ ಒಂದಾಗಿ ಬದುಕಬಹುದು. ಎಲ್ಲ ಧರ್ಮಗಳು ಒಂದಾಗಿ ಭಯೋತ್ಪಾದನೆಯನ್ನು ಸೋಲಿಸಿ ನಮ್ಮ ನೆಚ್ಚಿನ ನಗರ ಮೊಸುಲ್ ನನ್ನ ಮತ್ತೆ ಕಟ್ಟೋಣ" ಎಂದು ಅಬಾದಿ ಹೇಳಿದ್ದಾರೆ.
54000 ಕ್ಕಿಂತಲೂ ದೊಡ್ಡ ಇರಾಕಿ ಪಡೆ, ಮೈತ್ರಿ ಕಾರ್ಯಪಡೆ ಕಾರ್ಯಾಚರಣೆಯ ಕಮ್ಯಾಂಡರ್ ಲೆಫ್ಟಿನೆಂಟ್ ಜನರಲ್ ಸ್ಟಿಫನ್ ಟೌನ್ ಸೆಂಡ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ಮುಂದಾಗಿವೆ.
ಅಮೆರಿಕಾ ನೇತೃತ್ವದ ಐಸ್ ವಿರುದ್ಧದ ಈ ಕಾರ್ಯಾಚರಣೆಯಲ್ಲಿ ಹಲವು ಗುಂಪುಗಳಿದ್ದರು, ಇವರಲ್ಲಿ ಬಹುತೇಕರು ಇರಾಕಿಗಳು ಮತ್ತು ಕರ್ಡಿಶ್ ಹೋರಾಟಗಾರರು.
ಇರಾಕ್ ನ ಎರಡನೇ ಅತಿ ದೊಡ್ಡ ನಗರ ಮೊಸುಲ್ ಜೂನ್ 2014 ರಿಂದ ಐ ಎಸ್ ವಶದಲ್ಲಿದೆ.
ಮೊಸುಲ್ ನಲ್ಲಿ ಸುಮಾರು 5000 ಐಸಿಸ್ ಹೋರಾಟಗಾರರಿದ್ದಾರೆ ಎಂದು ಅಮೆರಿಕಾ ಮಿಲಿಟರಿ ಅಧಿಕಾರಿಗಳು ಅಂದಾಜಿಸಿದ್ದಾರೆ ಈ ಸಂಖ್ಯೆ 7000 ಎನ್ನುತ್ತಾರೆ ಐಸಿಸ್ ಬೆಂಬಲಿಗರು.