ವಾಷಿಂಗ್ ಟನ್: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ರಷ್ಯಾ ಹಾಗೂ ಚೀನಾದ ಬದ್ಧತೆಯನ್ನು ಅಮೆರಿಕ ಪ್ರಶ್ನಿಸಿದೆ.
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಚೀನಾ ಹಾಗೂ ರಷ್ಯಾ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಅಮೆರಿಕ ಆರೋಪಿಸಿದ್ದು, ತಾನು ಹೇಳುವುದಕ್ಕಿಂತಲೂ ವ್ಯತಿರಿಕ್ತವಾಗಿ ಉಭಯ ರಾಷ್ಟ್ರಗಳು ನಡೆದುಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ರಷ್ಯಾ ಹಾಗೂ ಚೀನಾ ಆ ರಾಷ್ಟ್ರಗಳು ಹೇಳಿಕೊಳ್ಳುವಷ್ಟು ಭಯೋತ್ಪಾದನೆ ವಿಷಯದಲ್ಲಿ ಬದ್ಧತೆ ಪ್ರದರ್ಶಿಸುತ್ತಿಲ್ಲ ಎಂಬುದು ಕೆಲವು ಘಟನೆಗಳಿಂದ ಸ್ಪಷ್ಟವಾಗತೊಡಗಿದ್ದು, ಉಭಯ ರಾಷ್ಟ್ರಗಳ ದ್ವಂದ್ವ ನೀತಿಗಳಿಂದಾಗಿ ಭಯೋತ್ಪಾದನೆ ವಿರುದ್ಧದ ಹೋರಾಟ ಮತ್ತಷ್ಟು ಜಟಿಲವಾಗತೊಡಗಿದೆ ಎಂದು ಅಮೆರಿಕದ ಶ್ವೇತಭವನ ಕಾರ್ಯದರ್ಶಿ ಜೋಶ್ ಅರ್ನೆಸ್ಟ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಬದ್ಧತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಇರುವ ರಷ್ಯಾ ನೀತಿಗಳಿಂದಾಗಿ ನಾವು ನಿರಾಶೆಗೊಂಡಿದ್ದೇವೆ ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ಜೋಶ್ ಅರ್ನೆಸ್ಟ್ ತಿಳಿಸಿದ್ದಾರೆ. ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತ ಲಷ್ಕರ್-ಎ- ತೊಯ್ಬಾ ಉಗ್ರ ಸಂಘಟನೆಯ ವಿರುದ್ಧ ಹೋರಾಡುವ ನಿಲುವು ಪ್ರಕಟಿಸಲು ಚೀನಾ, ರಷ್ಯಾ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಅಮೆರಿಕ ಈ ಹೇಳಿಕೆ ನೀಡಿದೆ.