ಬೀಜಿಂಗ್: ತೀವ್ರ ವಿವಾದಕ್ಕೀಡಾಗಿರುವ ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಅಮೆರಿಕ ವಿರುದ್ಧ ಚೀನಾ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದು, ವಿವಾದಾತ್ಮಕ ಪ್ರದೇಶದಲ್ಲಿ ಸಮರನೌಕೆಗಳನ್ನು ರವಾನೆ ಮಾಡುವ ಮೂಲಕ ಪ್ರಚೋದಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಚೀನಾ ಸೈನಿಕರ ಹಿಡಿತದಲ್ಲಿರುವ ವಿವಾದಾತ್ಮಕ ಚೀನಾ ಸಮುದ್ರದ ಪ್ಯಾರಾಸೆಲ್ ಐಲೆಂಡ್ ಬಳಿ ಅಮೆರಿಕ ದೇಶದ ಸಮರ ನೌಕೆಗಳು ಪ್ರವೇಶ ಮಾಡುತ್ತಿದ್ದು, ಚೀನಾ ಸೈನಿಕರ ಎಚ್ಚರಿಕೆ ಹೊರತಾಗಿಯೂ ಗಡಿ ಬಿಟ್ಟು ತೆರಳುತ್ತಿಲ್ಲ ಎಂದು ಚೀನಾ ಆರೋಪಿಸಿದೆ. ಚೀನಾದ ಎರಡು ಸಮರನೌಕೆಗಳು ಅಮೆರಿಕ ಸಮರನೌಕೆಗೆ ಎಚ್ಚರಿಕೆ ನೀಡಿದ್ದು, ಇದರ ಹೊರತಾಗಿಯೂ ಸುಮಾರು ಹೊತ್ತಿನವರೆಗೂ ಅಮೆರಿಕ ಸಮರ ನೌಕೆಗಳು ತೆರಳಲಿಲ್ಲ ಎಂದು ಚೀನಾ ಆರೋಪಿಸಿದೆ.
ಅಮೆರಿಕದ ಈ ನಡೆ ಪ್ರಚೋದನಾತ್ಮಕವಾಗಿದ್ದು, ವಿವಾದವನ್ನು ಭುಗಿಲೇಳಿಸುವ ಉದ್ದೇಶದಿಂದಲೇ ಅಮೆರಿಕ ತನ್ನ ಸಮರನೌಕೆಗಳನ್ನು ವಿವಾದಾತ್ಮಕ ಸಮುದ್ರ ಪ್ರದೇಶಕ್ಕೆ ಕಳುಹಿಸಿದೆ ಎಂದು ಬೀಜಿಂಗ್ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.
ಇನ್ನು ಪ್ರಸ್ತುತ ಚೀನಾ ತನ್ನದೆಂದು ಹೇಳಿಕೊಳ್ಳುತ್ತಿರುವ ಇದೇ ಪ್ಯಾರಾಸೆಲ್ ದ್ಪೀಪವನ್ನು ವಿಯೆಟ್ನಾಂ ಮತ್ತು ತೈವಾನ್ ದೇಶಗಳು ಕೂಡ ತಮ್ಮದೆಂದು ವಾದ ಮಾಡುತ್ತಿದ್ದು, ಇದೇ ಕಾರಣಕ್ಕೆ ಚೀನಾ ದೇಶ ಈ ಭಾಗದಲ್ಲಿ ಹಲವು ಕೃತಕ ದ್ವೀಪಗಳನ್ನು ನಿರ್ಮಿಸಿ ಅಲ್ಲಿ ತನ್ನ ಸೇನೆಯನ್ನು ನಿಯೋಜಿಸಿದೆ.
ವಿವಾದಿತ ಗಡಿ ಪ್ರವೇಶಿಸಿಲ್ಲ: ಪೆಂಟಗನ್ ಮಾಹಿತಿ
ಇನ್ನು ಚೀನಾದ ಆರೋಪದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ರಕ್ಷಣಾ ಇಲಾಖೆ, ತನ್ನ ಸಮರ ನೌಕೆ ಚೀನಾ ಸಮುದ್ರದಲ್ಲಿ ತೆರಳಿದ್ದು ನಿಜ. ಆದರೆ ಚೀನಾದ ವಿವಾದಿತ ಗಡಿ ಸಮುದ್ರವನ್ನು ನೌಕೆ ಪ್ರವೇಶಿಸಿಲ್ಲ. ಬದಲಿಗೆ 12 ನಾಟಿಕಲ್ ಮೈಲು ದೂರದಲ್ಲೇ ನೌಕೆ ಹಾದುಹೋಗಿದೆ. ಇದು ಸೇನೆಯ ಸಾಮಾನ್ಯ ತರಬೇತಿಯಷ್ಟೇ ಎಂದು ಪೆಂಟಗನ್ ಹೇಳಿದೆ.