ನ್ಯೂಯಾರ್ಕ್: ವಿಶ್ವಸಂಸ್ಥೆಯ 71 ನೇ ಮಹಾಸಭೆಯಲ್ಲಿ ಭಾಗವಾಹಿಸಲು ನ್ಯೂಯಾರ್ಕ್ ಗೆ ತೆರಳಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ವಿವಾದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಅಮೆರಿಕ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ.
ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿಯವರನ್ನು ಭೇಟಿ ಮಾಡಿರುವ ನವಾಜ್ ಷರೀಫ್, ಭಾರತ- ಪಾಕಿಸ್ತಾನದ ನಡುವಿನ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಅಮೆರಿಕ ಸಹಾಯ ಅಗತ್ಯ ಎಂದು ಹೇಳಿದ್ದಾರೆ. ಪಾಕಿಸ್ತಾನ ನೈತಿಕ ಹೊಣೆಗಾರಿಕೆಯನ್ನು ಅರಿತು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಪ್ರಾದೇಶಿಕ ಶಾಂತಿಗಾಗಿ ನೆರೆಯ ರಾಷ್ಟ್ರಗಳನ್ನು ತಲುಪಲು ಪಾಕಿಸ್ತಾನ ನಿರಂತರ ಯತ್ನ ನಡೆಸುತ್ತಿದೆ ಎಂದು ನವಾಜ್ ಷರೀಫ್ ಅಮೆರಿಕ ವಿದೇಶಾಂಗ ಸಚಿವರಿಗೆ ತಿಳಿಸಿದ್ದಾರೆ.
ಭಾರತ- ಪಾಕಿಸ್ತಾನ ನಡುವಿನ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಅಗತ್ಯ ನೆರವು ನೀಡುತ್ತದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಹೇಳಿದ್ದ ಮಾತುಗಳು ಈಗಲೂ ನನಗೆ ನೆನಪಿದೆ. ಪಾಕಿಸ್ತಾನ- ಭಾರತದ ನಡುವಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅಮೆರಿಕ ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ ಎಂದು ನವಾಜ್ ಷರೀಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.