ಕೊಲಂಬಿಯಾದಲ್ಲಿ ನಡೆದ ದುರ್ಘಟನೆಯಲ್ಲಿ ಅಪಾಯಕ್ಕೆ ಸಿಲುಕಿದವರ ಸಹಾಯಕ್ಕೆ ಧಾವಿಸಿರುವ ಸೈನಿಕರು ಮತ್ತು ಸ್ಥಳೀಯರು
ಬೊಗೊಟಾ: ಪ್ರವಾಹ ಮತ್ತು ಭೂಕುಸಿತದಿಂದ ನೀರು ಹರಿದು ಮನೆಗಳಿಗೆ ನುಗ್ಗಿ ಮಧ್ಯರಾತ್ರಿಯ ಸವಿ ನಿದ್ದೆಯಲ್ಲಿದ್ದ ಜನರಿಗೆ ಅಕ್ಷರಶಃ ದುಸ್ವಪ್ನವಾಗಿ ಕಾಡಿದ ಘಟನೆ ಕೊಲಂಬಿಯಾದ ಸಣ್ಣ ನಗರದಲ್ಲಿ ನಡೆದಿದೆ.
ಹಠಾತ್ ನೀರು ನುಗ್ಗಿದ್ದರಿಂದ ಇಲ್ಲಿಯವರೆಗೆ ಸುಮಾರು 254 ಮಂದಿ ಮೃತಪಟ್ಟಿದ್ದು ಅನೇಕ ಕಾರುಗಳು, ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.ಕೊಲಂಬಿಯಾದ ದಕ್ಷಿಣ ಗಡಿಯಲ್ಲಿರುವ ಈಕ್ವೆಡಾರ್ ನಲ್ಲಿ ಬೆಟ್ಟಗಳ ಪಕ್ಕದಲ್ಲಿ ಮೊಕೊವಾ ಎಂಬ ಪ್ರಾಂತೀಯ ರಾಜಧಾನಿಯಲ್ಲಿ ಕಳೆದ ಮಧ್ಯರಾತ್ರಿ ತೀವ್ರ ಬಿರುಗಾಳಿ ಮಳೆ ಕಾಣಿಸಿಕೊಂಡು ಈ ಘಟನೆ ನಡೆದಿದೆ.
ಮಣ್ಣು ತುಂಬಿದ ನೀರು ನಗರದ ತುಂಬೆಲ್ಲಾ ತುಂಬಿ ಹೋಗಿ ಮನೆಗಳಿಗೆ ನೀರು ನುಗ್ಗಿದವು. ನೀರು ಹರಿಯುವಿಕೆಯ ರಭಸಕ್ಕೆ ಅನೇಕ ಮರಗಳು, ಮನೆಗಳು ಕೊಚ್ಚಿ ಹೋದವು. ದೊಡ್ಡ ಬಂಡೆಗಳು ಮತ್ತು ಅನೇಕ ಅವಶೇಷಗಳು ಪ್ರವಾಹದಲ್ಲಿ ಕೊಚ್ಚಿ ಹೋದವು. ಮಧ್ಯರಾತ್ರಿಯ ಹೊತ್ತಾಗಿದ್ದರಿಂದ ಜನರಿಗೆ ತಪ್ಪಿಸಿಕೊಳ್ಳಲ, ಬೇರೆಡೆಗೆ ಓಡಿಹೋಗಲು ಸಮಯಾವಕಾಶವೇ ಇರಲಿಲ್ಲ.
ರೆಡ್ ಕ್ರಾಸ್ ಸಂಸ್ಥೆ ಪ್ರಕಾರ, 202 ಮಂದಿಗೆ ಗಾಯಗಳಾಗಿದ್ದು ಸುಮಾರು 220 ಮಂದಿ ಕಣ್ಮರೆಯಾಗಿದ್ದಾರೆ. ಅಧ್ಯಕ್ಷ ಜುವಾನ್ ಮ್ಯಾನ್ಯುವಲ್ ಸಂತೋಸ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಪರಿಹಾರ ಕಾರ್ಯ ಭರದಿಂದ ಸಾಗುತ್ತಿದೆ.