ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ಗಲ್ಲು ಶಿಕ್ಷೆ ವಿಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರಿ ಗೌತಮ್ ಬಂಬಾವಾಲೆ ಪಾಕಿಸ್ತಾನದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ತೆಹ್ಮೀನಾ ಜಂಜುವಾ ಅವರನ್ನು ಭೇಟಿ ಮಾಡಲಿದ್ದಾರೆ.
ಕುಲಭೂಷಣ್ ಜಾಧವ್ ಪರ ವಾದಿಸಲು ನ್ಯಾಯವಾದಿಯನ್ನು ನೇಮಿಸುವ ಭಾರತದ ಮನವಿಯನ್ನು ಪಾಕಿಸ್ತಾನ 13 ಬಾರಿ ತಿರಸ್ಕರಿಸಿರುವುದನ್ನೂ ಪಾಕಿಸ್ತಾನದೊಂದಿಗಿನ ಸಭೆಯಲ್ಲಿ ಗೌತಮ್ ಬಂಬಾವಾಲೆ ಪ್ರಸ್ತಾಪಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.
ಜಾಧವ್ ಅವರ ಸ್ಥಿತಿಗತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ಸಚಿವಾಲಯ ನೌಕಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆ, ಹೇಗಿದ್ದಾರೆ ಎಂಬುದರ ಬಗ್ಗೆ ಭಾರತಕ್ಕೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿತ್ತು. ಈ ಬಳಿಕ ಭಾರತೀಯ ರಾಯಭಾರಿ ಅಧಿಕಾರಿ ಗೌತಮ್ ಬಂಬಾವಾಲೆ ಪಾಕ್ ವಿದೇಶಾಂಗ ಕಾರ್ಯದರ್ಶಿಯನ್ನು ಭೇಟಿ ಮಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ.