ಪ್ಯೋಂಗ್ಯಾಂಗ್: ಅಮೆರಿಕದೊಂದಿಗೆ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ನಡೆದ ವಾರ್ಷಿಕ ಪರೇಡ್ ನಲ್ಲಿ ಉತ್ತರ ಕೊರಿಯಾ ತನ್ನ ಖಂಡಾಂತರ ಕ್ಷಿಪಣಿಗಳ ಬೃಹತ್ ಪರೇಡ್ ನಡೆಸುವ ಮೂಲಕ ಬಲ ಪ್ರದರ್ಶಿಸಿದೆ.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಂಗ್ ಉನ್ ಅವರ ತಾತ ಕಿಮ್ 2 ಸಂಗ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಪ್ರತೀ ವರ್ಷ ಪರೇಡ್ ನಡೆಸಲಾಗುತ್ತದೆ. ಈ ವರ್ಷದ ಪೆರೇಡ್ನಲ್ಲಿ ಉತ್ತರ ಕೊರಿಯಾ ತನ್ನಲ್ಲಿರುವ ಖಂಡಾಂತರ ಕ್ಷಿಪಣಿಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವ ಮೂಲಕ ತಾವು ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ರವಾನಿಸಿದೆ.
ವಾರ್ಷಿಕ ಪರೇಡ್ ನಲ್ಲಿ ಕಿಮ್ ಜಂಗ್ ಮಾತನಾಡಿಲ್ಲ. ಆದರೆ ಅಮೆರಿಕ ಯುದ್ಧ ಸನ್ನಿವೇಶವನ್ನು ಸೃಷ್ಟಿಸುತ್ತಿದೆ. ಒಂದು ವೇಳೆ ಯುದ್ಧ ಸಂಭವಿಸಿದರೆ ನಾವು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಅಣ್ವಸ್ತ್ರ ದಾಳಿ ನಡೆದರೆ ಅದಕ್ಕೂ ಸಹ ನಾವು ನಮ್ಮದೇ ಆದ ವಿಧದಲ್ಲಿ ಪ್ರತಿದಾಳಿ ನಡೆಸುತ್ತೇವೆ ಎಂದು ಉತ್ತರ ಕೊರಿಯಾ ಸರ್ಕಾರದ ಹಿರಿಯ ಅಧಿಕಾರಿ ಚೋ ರ್ಯೋಂಗ್ ಹೀ ಪರೇಡ್ ನಂತರ ಪ್ರತಿಕ್ರಿಯೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ತಮ್ಮ ಉದ್ರೇಕಕಾರಿ ಹೇಳಿಕೆಗಳಿಂದ ನಮಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಉತ್ತರ ಕೊರಿಯಾದ ಉಪ ವಿದೇಶಾಂಗ ಸಚಿವ ಹಾನ್ ಸಾಂಗ್ ರ್ಯೋಲ್ ಶುಕ್ರವಾರ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ಇದರ ಬೆನ್ನಲ್ಲೇ ಉತ್ತರ ಕೊರಿಯಾದ ಸೇನೆ ಕೂಡ ಹೇಳಿಕೆ ಬಿಡುಗಡೆ ಮಾಡಿ ಇರಾಕ್ ಮತ್ತು ಲಿಬಿಯಾದ ಮೇಲೆ ದಾಳಿ ನಡೆಸಿದಂತೆ ಉತ್ತರ ಕೊರಿಯಾದ ಮೇಲೆ ದಾಳಿ ನಡೆಸುವ ಮುನ್ನ ಅಮೆರಿಕ ಚಿಂತನೆ ನಡೆಸಬೇಕು. ಅಮೆರಿಕದ ದಾಳಿಯಿಂದಾಗಿ ಇರಾಕ್ ಮತ್ತು ಲಿಬಿಯಾದಲ್ಲಿ ತೀವ್ರ ಹಾನಿಯಾಗಿದೆ. ಜತೆಗೆ ಸಿರಿಯಾದ ಮೇಲೆ ಅಮೆರಿಕ ದಾಳಿ ನಡೆಸಿದರೂ ಸಹ ಅದು ಪ್ರತಿದಾಳಿ ನೀಡುವಷ್ಟು ಸಮರ್ಥವಾಗಿಲ್ಲ ಎಂದು ತಿಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics