ವಿದೇಶ

117 ನೇ ವಯಸ್ಸಿನಲ್ಲಿ ಮೃತಪಟ್ಟ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಮ್ಮಾ ಮೊರನೊ

Sumana Upadhyaya
ರೋಮ್: ವಿಶ್ವದ ಅತ್ಯಂತ ಹಿರಿ ವಯಸ್ಸಿನ ಮತ್ತು 19ನೇ ಶತಮಾನದ ಕೊನೆಯ ವ್ಯಕ್ತಿ ಇಟೆಲಿಯ ಎಮ್ಮಾ ಮೊರನೊ ನಿನ್ನೆ ನಿಧನರಾಗಿದ್ದಾರೆ. ಅವರಿಗೆ 117 ವರ್ಷ ವಯಸ್ಸಾಗಿತ್ತು ಎಂದು ಇಟೆಲಿಯ ಮಾಧ್ಯಮ ವರದಿ ಮಾಡಿದೆ.
ಮೊರನೊ 1899, ನವೆಂಬರ್ 29ರಂದು ಜನಿಸಿದ್ದು ಉತ್ತರ ಇಟೆಲಿಯ ವರ್ಬಾನಿಯಾದಲ್ಲಿ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.
ತಮ್ಮ ಜೀವಿತಾವಧಿಯನ್ನು ಸಂತೋಷದಿಂದ ಕಳೆದ ಮೊರನೊ ಅವರು ಬದುಕಿನ ಕೊನೆ ಗಳಿಗೆಯವರೆಗೂ ಆಶಾವಾದ ಹೊಂದಿದ್ದರು ಎಂದು ವರ್ಬಾನಿಯಾ ಮೇಯರ್ ಹೇಳುತ್ತಾರೆ.
ಅಮೆರಿಕಾ ಮೂಲದ ಗೆರೊಂಟಾಲಜಿ ರಿಸರ್ಚ್ ಗ್ರೂಪ್, ಮೊರನೊ ನಂತರ ಇದೀಗ ಜಮೈಕಾದ ವಿಯೊಲೆಟ್ ಬ್ರೌನ್ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. ಅವರು ಹುಟ್ಟಿದ್ದು ಮಾರ್ಚ್ 10, 1900.
ಮೊರಾನೊ ಅವರ ಮೊದಲ ಪತಿ ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ನಿಧನರಾದರು. ಎರಡನೇ ಮದುವೆಯಾದರು. ಆದರೆ ಎರಡನೇ ವಿಶ್ವಯುದ್ಧದ ಹೊತ್ತಿಗೆ ತಮ್ಮ ಕ್ರೂರ ಪತಿಯ ಜೊತೆ ಸಂಸಾರ ನಡೆಸಲು ಸಾಧ್ಯವಾಗದೆ ವಿಚ್ಛೇದನ ನೀಡಿದರು. ಹೆತ್ತ ಗಂಡು ಮಗು ಕೂಡ ತೀರಿಕೊಂಡಿತು.
ಮೊರನೊ ಎಂದೆಂದಿಗೂ ಸ್ವತಂತ್ರ ಬದುಕು ನಡೆಸುವ ತುಡಿತ ಹೊಂದಿದ್ದರು. ತಮ್ಮ ಎರಡು ರೂಮಿನ ಅಪಾರ್ಟ್ ಮೆಂಟ್ ನಲ್ಲಿ ಸುಮಾರು 20 ವರ್ಷ ಜೀವಿಸಿದ್ದರು. ಕೊನೆಗಾಲದಲ್ಲಿ ಹಾಸಿಗೆ ಹಿಡಿದಿದ್ದರು.
ಇಳಿ ವಯಸ್ಸಿನಲ್ಲಿ ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಹೊಂದಿದ್ದರು. ದಿನಕ್ಕೆ ಎರಡು ಮೊಟ್ಟೆ, ಕುಕ್ಕೀಸ್ ಅವರ ಆಹಾರವಾಗಿತ್ತು. ನನಗೆ ಹಲ್ಲು ಇಲ್ಲದ ಕಾರಣ ಹೆಚ್ಚು ತಿನ್ನಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದರು. 
ಮೊರಾನೊ ತಮ್ಮ ತಂದೆ-ತಾಯಿಯ 8 ಜನ ಮಕ್ಕಳಲ್ಲಿ ಹಿರಿಯರು.
SCROLL FOR NEXT