ಪಾಕಿಸ್ತಾನ ರಕ್ಷಣಾ ಸಚಿವ ಖವಾಜ ಅಸೀಫ್
ಮಾಸ್ಕೋ (ರಷ್ಯಾ): ಕಾಶ್ಮೀರ ಸಮಸ್ಯೆ ಬಗೆಹರಿಸಲು ಪಾಕಿಸ್ತಾನ ಎಲ್ಲಾ ರೀತಿಯ ಶ್ರಮ ಹಾಗೂ ಪ್ರಯತ್ನಗಳನ್ನು ಪಡುತ್ತಿದ್ದರೂ ಭಾರತ ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪಾಕಿಸ್ತಾನ ಮತ್ತೆ ಕ್ಯಾತೆ ತೆಗೆದಿದೆ.
ಅಂತರಾಷ್ಟ್ರೀಯ ಭದ್ರತೆ ಕುರಿತಂತೆ 6ನೇ ಮಾಸ್ಕೋ ಸಮಾವೇಶದಲ್ಲಿ ಮಾತನಾಡಿರುವ ಪಾಕಿಸ್ತಾನ ರಕ್ಷಣಾ ಸಚಿವ ಖವಾಜ ಅಸೀಫ್ ಅವರು, ಬಗೆಹರಿಯದ ಕಾಶ್ಮೀರದ ಸಮಸ್ಯೆ, ಇಡೀ ಕಾಶ್ಮೀರದ ಶಾಂತಿ ಹಾಗೂ ಸ್ಥಿರತೆಗೆ ಬೆದರಿಕೆಯೊಡ್ಡುವ ಸಾಮರ್ಥ್ಯವುಳ್ಳದ್ದಾಗಿದೆ. ಹೀಗಾಗಿ ಕಾಶ್ಮೀರ ಸಮಸ್ಯೆ ಬಗೆಹರಿಸಲು ಪಾಕಿಸ್ತಾನ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಭಾರತ ಮಾತ್ರ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಾಶ್ಮೀರ ಸಮಸ್ಯೆ ವಿಶ್ವಸಂಸ್ಥೆಯ ನಿರ್ಣಯಕ್ಕೆ ಅನುಗುಣವಾಗಿ ಬಗೆಹರಿಯಬೇಕಿದೆ. ಕಾಶ್ಮೀರ ಸಮಸ್ಯೆ ಬಗೆಹರಿಸಲು ಪಾಕಿಸ್ತಾನ ಪ್ರಾಮಾಣಿಕವಾಗಿ ಶ್ರಮ ಪಡುತ್ತಿದೆ. ಆದರೆ, ಭಾರತ ಮಾತ್ರ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಸಮಸ್ಯೆ ಕುರಿತ ನಿರ್ಣಯದ ಸಂಬಂಧ ಸಮಂಜಸವಾದ ರಾಜತಾಂತ್ರಿಕ ವಿಧಾನ ಅನುಸರಿಸುವಲ್ಲಿ ಭಾರತ ದೂರ ಉಳಿಯುತ್ತಿದೆ.
ಹೀಗಾಗಿ ಹಲವು ವರ್ಷಗಳಿಂದಲೂ ಬಗೆಹರಿಯದೇ ಉಳಿದಿರುವ ಸಮಸ್ಯೆಯನ್ನು ಬಗೆಹರಿಸುವುದು ವಿಶ್ವ ಸಮುದಾಯದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.