ಬಾರ್ಸಿಲೋನಾ: ಬಾರ್ಸಿಲೋನಾ ನಗರದ ಮೇಲೆ ಭೀಕರ ದಾಳಿ ಮಾಡಿದ್ದ ಉಗ್ರರ ಪೈಕಿ ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಸ್ಪೇನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಾಸ್ ರಾಂಬ್ಲಾಸ್ ನಲ್ಲಿ ನಡೆದ ಭೀಕರ ಟ್ರಕ್ ದಾಳಿ ಬೆನ್ನಲ್ಲೇ ಉಗ್ರರ ಬೆನ್ನಟ್ಟಿದ್ದ ಸ್ಪೇನ್ ಪೊಲೀಸರು ಇದೀಗ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ದಾಳಿಗೆ ಮೊದಲೇ ಸಕಲ ತಯಾರಿ ನಡೆಸಿಕೊಂಡು ಬಂದಿದ್ದ ಉಗ್ರರು ತಮ್ಮ ಸೊಂಟಕ್ಕೆ ಬೆಲ್ಟ್ ಬಾಂಬ್ ಕಟ್ಟಿಕೊಂಡು ಬಂದಿದ್ದರಂತೆ. ಆದರೆ ಪೊಲೀಸರ ಚಾಕಚಕ್ಯತೆಯಿಂದಾಗಿ ಇಬ್ಬರು ಉಗ್ರರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಮೂಲಗಳ ಪ್ರಕಾರ ಬಂಧಿತ ಉಗ್ರರು ಮೊರಾಕ್ಕೊ ಮತ್ತು ಮೆಲಿಲಾ ಮೂಲದವರು ಎಂದು ತಿಳಿದುಬಂದಿದೆ.
ಉತ್ತರ ಸ್ಪೇನ್ ನಲ್ಲಿರುವ ಮೆಲಿಲಾದಲ್ಲಿ ಉತ್ತರ ಆಫ್ರಿಕನ್ ಪ್ರಜೆಗಳು ಹೆಚ್ಚಾಗಿ ವಾಸ ಮಾಡುತ್ತಿದ್ದು, ಇದೀಗ ಆ ಪ್ರದೇಶದ ಯುವಕರನ್ನು ಶಂಕೆಯಿಂದ ನೋಡುವಂತಾಗಿದೆ.
ದಾಳಿಯಲ್ಲಿ ಬೆಲ್ಜಿಯಂ ಮೂಲದ ನಾಗರೀಕರು ಕೂಡ ಬಲಿ: ಬೆಲ್ಜಿಯಂ ಉಪ ಪ್ರಧಾನಿ ಸ್ಪಷ್ಟನೆ
ಇನ್ನು ಟ್ರಕ್ ದಾಳಿ ವೇಳೆ ಸ್ಪೇನ್ ನಾಗರಿಕರೂ ಸೇರಿದಂತೆ ವಿಶ್ವದ ನಾನಾ ದೇಶಗಳ ನಾಗರಿಕರು ಕೂಡ ಗಾಯಗೊಂಡಿದ್ದು, ಲಾಸ್ ರಾಂಬ್ಲಾಸ್ ದಾಳಿಯಲ್ಲಿ ಬೆಲ್ಡಿಯಂ ನ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಬೆಲ್ಜಿಯಂ ರಾಯಭಾರ ಕಚೇರಿ ಸ್ಪಷ್ಟ ಪಡಿಸಿದೆ. ಈ ಬಗ್ಗೆ ಸ್ವತಃ ಬೆಲ್ಜಿಯಂ ಉಪ ಪ್ರಧಾನಿ ಡಿಡೈರ್ ರೇನ್ಡರ್ಸ್ ಅವರು ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.