ಬೀಜಿಂಗ್: ಬೀಜಿಂಗ್ ನಲ್ಲಿ ಮುಂದಿನ ವಾರ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕಿಸ್ತಾನ ಭಯೋತ್ಪಾದನೆಯ ಕುರಿತು ಚರ್ಚಿಸುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಚೀನಾ ಭಾರತಕ್ಕೆ ಸ್ಪಷ್ಟಪಡಿಸಿದೆ.
ಜಗತ್ತನ್ನೇ ಬಾದಿಸುತ್ತಿರುವ ಭಯೋತ್ಪಾದನೆ ವಿರುದ್ಧ ಶಕ್ತಿಶಾಲಿ ರಾಷ್ಟ್ರಗಳು ಒಟ್ಟಾಗಿ ಸೇರಿ ಹೋರಾಡಬೇಕು ಎಂದು ಭಾರತ ಪ್ರತಿಪಾದಿಸುತ್ತಾ ಬಂದಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ಸಮಾವೇಶದಲ್ಲೂ ಭಯೋತ್ಪಾದನೆ ಕುರಿತು ಧನಿ ಎತ್ತುವ ಸಾಧ್ಯತೆ ಇದೆ. ಇದಕ್ಕೆ ಚೀನಾ ಮುಂಚಿತವಾಗಿಯೇ ಪಾಕಿಸ್ತಾನದ ಭಯೋತ್ಪಾದನೆಯ ಕುರಿತು ಚರ್ಚೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಚೀನಾದ ವಿದೇಶಾಂಗ ವಕ್ತಾರ ಹುವಾ ಶುನ್ಯಿಂಗ್ ಅವರು ಇಸ್ಲಾಮಾಬಾದ್ ಯಾವತ್ತೂ ಭಯೋತ್ಪದಾನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಉಗ್ರವಾದವನ್ನು ಕೊನೆಗಾಣಿಸಲು ಅಪರಿಮಿತ ತ್ಯಾಗಗಳನ್ನು ಮಾಡಿದೆ . ಇನ್ನು ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ಈ ತ್ಯಾಗವನ್ನು ಪರಿಗಣಿಸಬೇಕಾಗಿದೆ ಎಂದು ಹೇಳಿದರು.
ಇದರೊಂದಿಗೆ ಸರ್ವಋತುವಿನಲ್ಲೂ ಸ್ನೇಹಿತನಾಗಿರುವ ಪಾಕಿಸ್ತಾನವನ್ನು ಚೀನಾ ಬೆಂಬಲಿಸಿದೆ. ಚೀನಾದ ಬೆಂಬಲದಿಂದಲೇ ಪಾಕಿಸ್ತಾನ ಪದೇ ಪದೇ ಗಡಿಯಲ್ಲಿ ಕ್ಯಾತೆ ತೆಗೆಯುತ್ತಾ ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics