ಇಸ್ಲಾಮಾಬಾದ್: ಇತ್ತೀಚಿಗಷ್ಟೇ ಲಷ್ಕರ್ ಇ ತೊಯಿಬಾ(ಎಲ್ ಇಟಿ) ಮತ್ತು ಜಾಮಾತ್ ಉದ್ ದಾವಾ(ಜೆಯುಡಿ) ಉಗ್ರ ಸಂಘಟನೆಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಅವರು ಮುಂದಿನ ವರ್ಷ ನಡೆಯಲಿರುವ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಯುಡಿ ಮುಖ್ಯಸ್ಥ ಹಾಗೂ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಸಂದರ್ಶನವೊಂದರಲ್ಲಿ ಜೆಯುಡಿ ಮುಖ್ಯಸ್ಥ ಸಯೀದ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಪಾಕ್ ಮಾಜಿ ಅಧ್ಯಕ್ಷ, ಈ ಸಂಬಂಧ ಇದುವರೆಗೂ ಯಾವುದೇ ಮಾತುಕತೆ ನಡೆದಿಲ್ಲ. ಆದರೆ ಹಫೀಜ್ ಸಯೀದ್ ಮೈತ್ರಿ ಮಾಡಿಕೊಳ್ಳಲು ಬಯಸಿದರೆ ತಾವು ಅದನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.
ಮುಷರ್ರಫ್ ಅವರು ಇತ್ತಿಚೀಗೆ ಸುನ್ನಿ ತೆಹ್ರೀಕ್, ಮಜ್ಲಿಸ್-ಇ-ವಹ್ದತುಲ್ ಮುಸ್ಲಿಮೀನ್, ಪಾಕಿಸ್ತಾನ ಅವಾಮಿ ತೆಹೀರಿಕ್ ಸೇರಿದಂತೆ ಸುಮಾರು ಎರಡು ಡಜನ್ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ, ಮಹಾ ರಾಜಕೀಯ ಮೈತ್ರಿಕೂಟ ರಚಿಸುವುದಾಗಿ ಘೋಷಿಸಿದ್ದರು.
ಹಫೀಜ್ ಸಯೀದ್ ಪಾಕಿಸ್ತಾನದ ಕೆಲವು ಧಾರ್ಮಿಕ ಸಂಘಟನೆಗಳಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು, ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾನೆ.