ಭಾರತೀಯ ಪ್ರಜೆ ಕುಲ್'ಭೂಷಣ್ ಜಾಧವ್
ಖೆಟ್ಟಾ: ಭಾರತೀಯ ಪ್ರಜೆ ಕುಲ್'ಭೂಷಣ್ ಜಾಧವ್ ಅವರನ್ನು ಬಲೂಚಿಸ್ತಾನದಲ್ಲಿ ಎಂದಿಗೂ ಬಂಧನಕ್ಕೊಳಪಡಿಸಿರಲಿಲ್ಲ ಎಂದು ಬಲೂಚಿಸ್ತಾನದ ನಾಯಕ ಹಿರ್ಬೈರ್ ಮರ್ರಿಯವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಭಾರತೀಯ ಪ್ರಜೆ ಜಾಧವ್ ಅವರನ್ನು ಬಲೂಚಿಸ್ತಾನದಲ್ಲಿ ಎಂದಿಗೂ ಬಂಧನಕ್ಕೊಳಪಡಿಸಿರಲಿಲ್ಲ. ಜಾಧವ್ ಅವರನ್ನು ಪಾಕಿಸ್ತಾನ ಪ್ರಾಯೋಜಿತ ಧಾರ್ಮಿಕ ಪ್ರಾಕ್ಸಿಗಳು ಇರಾನ್ ನಲ್ಲಿ ಅಪಹರಿಸಿದ್ದರು. ಬಳಿಕ ಪಾಕಿಸ್ತಾನದವರ ವಶಕ್ಕೆ ನೀಡಿದ್ದರು. ಇದೇ ರೀತಿಯ ಅದೆಷ್ಟೋ ಪ್ರಕರಣಗಳೂ ನಡೆದಿವೆ. ಆಫ್ಘಾನಿಸ್ತಾನದಲ್ಲಿರುವ ಬಲೂಚಿಸ್ತಾನದ ವಲಸಿಗರನ್ನು ಅಫ್ಘಾನಿಸ್ತಾನಕ್ಕೆ ತೆರಳುತ್ತಿರುವವರನ್ನು ಅಪರಹಣ ಮಾಡುವ ಜನರು ಬಳಿಕ ಅವರನ್ನು ಐಎಸ್ಐ ಮತ್ತು ಪಾಕಿಸ್ತಾನದ ಸೇನೆಗಳ ವಶಕ್ಕೆ ನೀಡುತ್ತಾರೆಂದು ಹೇಳಿದ್ದಾರೆ.
70 ಮತ್ತು 80 ದಶಕದಲ್ಲಿ ತಾಲಿಬಾನ್ ಜೊತೆ ಕೈಜೋಡಿಸಿದ್ದ ಪಾಕಿಸ್ತಾನ ಮುಗ್ಧ ಮರ್ರಿ ಬಲೂಚ್ ವಲಸಿಗರನ್ನು ಹತ್ಯೆ ಮಾಡಿತ್ತು. ಎಷ್ಟೋ ಜನರ ರುಂಡಗಳನ್ನು ಕತ್ತರಿಸಿದ್ದರು. ಬಳಿಕ ಫೋಟೋಗಳನ್ನು ತೆಗೆದು ಐಎಸ್ಐ ಹಾಗೂ ಪಾಕಿಸ್ತಾನದ ಸೇನೆಗೆ ಆ ಫೋಟೋಗಳನ್ನು ನೀಡಿ ಹಣವನ್ನು ಪಡೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.
ಪುತ್ರ ಹಾಗೂ ಪತಿಯನ್ನು ಭೇಟಿ ಮಾಡುವ ಸಲುವಾಗಿ ಜಾಥವ್ ಅವರ ಪತ್ನಿ ಹಾಗೂ ತಾಯಿಯವರೊಂದಿಗೆ ಪಾಕಿಸ್ತಾನ ನಡೆದುಕೊಂಡ ಅಮಾನವೀಯ ವರ್ತನೆ ಕುರಿತಂತೆ ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನದ ಈ ಅಮಾನವೀಯ ವರ್ತನೆ ಕುರಿತಂತೆ ಹಾಗೂ ಬಲೂಚಿಸ್ತಾನದಲ್ಲಿರುವ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತಂತೆ ಇಡೀ ವಿಶ್ವ ಕಣ್ಣು ತೆರೆದು ನೋಡಬೇಕಿದೆ ಎಂದಿದ್ದಾರೆ,
ಜಾಧವ್ ತಾಯಿ ಹಲವು ವರ್ಷಗಳ ಬಳಿಕ ಪುತ್ರನನ್ನು ನೋಡಲೆಂದು ಪಾಕಿಸ್ತಾನಕ್ಕೆ ತೆರಳಿದ್ದರು. ವಯಸ್ಸಾದ ಜಾಧವ್ ತಾಯಿಗೆ ಪಾಕಿಸ್ತಾನ ಈ ರೀತಿಯ ಅಗೌರವ ತೋರಿಸಿದೆ ಎಂದಾದರೆ, ಬಲೂಚಿಸ್ತಾನದ ಕೈದಿಗಳಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಯಾವ ರೀತಿ ಚಿತ್ರಹಿಂಸೆ ನೀಡುತ್ತಿದೆ ಎಂಬುದನ್ನೂ ಊಹಿಸಲೂ ಅಸಾಧ್ಯ. ಪಾಕಿಸ್ತಾನದ ಸೇನೆಯ ರಹಸ್ಯ ಹಾಗೂ ಅಕ್ರಮ ಕೇಂದ್ರಗಳಲ್ಲಿ ಬಲೂಚಿಸ್ತಾನದ ಜನರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಕೆಲವೆಡೆ ಹಿಂಸಾತ್ಮಕ ಕೇಂದ್ರಗಳಿದ್ದು, ಸ್ವತ ಪಾಕಿಸ್ತಾನದ ಸೆನೆಟರ್ ಫರ್ಹತುಲ್ಲಾ ಬಾಬರ್ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ, ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಅವರು, ಪಾಕಿಸ್ತಾನದೊಳಗೇ ಕೆಲ ಹಿಂಸಾಚಾರ ನೀಡುವ ಕೇಂದ್ರಗಳಿದ್ದು, ಸಂಸತ್ತು ಸೇರಿದಂತೆ ಸುಪ್ರೀಂಕೋರ್ಟ್'ಗೂ ಈ ಬಗ್ಗೆ ಮಾಹಿತಿಯಿಲ್ಲ. ಇಂತಹ ಕೇಂದ್ರಗಳಲ್ಲಿ ಅಸಂಖ್ಯಾತ ಜನರು ಸಾವನ್ನಪ್ಪಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಹೇಳಿದ್ದರು. ಪಾಕಿಸ್ತಾನ ನಂಬಿಕೆ ಅರ್ಹ ದೇಶವಲ್ಲ. ಇದು ಬಲೂಚಿಸ್ತಾನದವರಿಗೆ ಬಹಳ ಚೆನ್ನಾಗಿ ಅರ್ಥವಾಗಿದೆ. ಪಾಕಿಸ್ತಾನ ವಿಷಕಾರುವ ಹಾವು ಇದ್ದಂತೆ. ತನಗೆ ಹಾಲೆರೆಯುವ ಕೈಯನ್ನೇ ಕಚ್ಚುವ ದೇಶ ಪಾಕಿಸ್ತಾನ ಎಂದು ಹೇಳಿದ್ದಾರೆ.