ಸಿಡ್ನಿಯಲ್ಲಿ ಹೊಸ ವರ್ಷದ ಸಂಭ್ರಮ
ನವದೆಹಲಿ: ಸಂಭ್ರಮದ 2018ಕ್ಕೆ ವಿಶ್ವ ವಿಜೃಂಭಣೆಯ ಸ್ವಾಗತ ಕೋರಿದ್ದು, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 2018ಕ್ಕೆ ಪಟಾಕಿ ಸಿಡಿಮದ್ದು ಪ್ರದರ್ಶನದ ಮೂಲಕ ಸ್ವಾಗತ ಕೋರಲಾಗಿದೆ.
ಭಾರತದಲ್ಲಿ ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ವಿಶ್ವ ವಿವಿಧ ದೇಶಗಳಲ್ಲಿ ಈಗಾಗಲೇ ಹೊಸ ವರ್ಷಾಚರಣೆ ಆರಂಭವಾಗಿದ್ದು, ಪೊಲಿನೇಷಿಯಾದ ಸಮೋಅ ಇಡೀ ವಿಶ್ವದಲ್ಲೇ ಹೊಸ ವರ್ಷವನ್ನು ಬರ ಮಾಡಿಕೊಂಡ ಮೊದಲ ದೇಶವಾಗಿದೆ. ಸಮೋಅನ್ ದ್ವೀಪ ಪ್ರದೇಶದಲ್ಲಿ ಹೊಸ ವರ್ಷಾಚರಣೆ ಸಂಭ್ರಮ ಮುಗಿಲು ಮುಟ್ಟಿದ್ದು, ಬಳಿಕ ಇದೇ ಪೊಲಿನೇಷಿಯಾದ ಟೊಂಗಾ ಮತ್ತು ಕ್ರಿಸ್ಟ್ ಮಸ್ ಐಲೆಂಡ್ ಗಳು ಹೊಸ ವರ್ಷಕ್ಕೆ ಸ್ವಾಗತ ಕೋರಿವೆ.
ಇನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಗಳಲ್ಲೂ 2017ಕ್ಕೆ ಗುಡ್ ಬೈ ಹೇಳಿ, 2018ಕ್ಕೆ ವಿಜೃಂಭಣೆಯ ಸ್ವಾಗತ ಕೋರಲಾಗಿದೆ. ನ್ಯೂಜಿಲೆಂಡ್ ನ ಆಕ್ಲೆಂಡ್ ನಗರದಲ್ಲಿ ಸುಮಾರು 10 ಸಾವಿರ ಜನಸಮೂಹ 2018ಕ್ಕೆ ಸ್ವಾಗತ ಕೋರಿವೆ.ಆಕ್ಲೆಂಡ್ ನ ಸ್ಕೈ ಟವರ್ ನಲ್ಲಿ ಸತತ 5 ನಿಮಿಷಗಳ ಸಿಡಿಮದ್ದು ಸಿಡಿಸುವ ಮೂಲಕ 2018ಕ್ಕೆ ಸ್ವಾಗತ ಕೋರಲಾಯಿತು. ಇನ್ನು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ರೈನ್ ಬೋ ಥೀಮ್ ಹೊಸ ವರ್ಷ ಸಂಭ್ರಮ ನೋಡುಗರ ಸೆಳೆಯಿತು.
ಇದರ ಬೆನ್ನಲ್ಲೇ ಉತ್ತರ ಕೊರಿಯಾದಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲಾಗಿದ್ದು, ರಾಜಧಾನಿ ಪ್ಯೋಗ್ಯಾಂಗ್ ನಲ್ಲಿ ಸಿಡಿ ಮದ್ದು ಸಿಡಿಸಿ 2018ನ್ನು ಸ್ವಾಗತಿಸಲಾಯಿತು.