ವಾಷಿಂಗ್ಟನ್: ಉಬರ್ ಸಂಸ್ಥೆಯ ಸಹಸಂಸ್ಥಾಪಕ ಟ್ರಾವಿಸ್ ಕಲಾನಿಕ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ಸಲಹಾ ಸಮಿತಿಯಿಂದ ಹೊರಬಿದಿದ್ದಾರೆ.
ಮೂಲಗಳ ಪ್ರಕಾರ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಗೆ ಸಂಬಂಧಿಸಿದಂತೆ ಅಸಂತೃಪ್ತಿಯಿಂದ ಇರುವ ತಮ್ಮ ಸಂಸ್ಥೆಯ ಗ್ರಾಹಕರು ಖ್ಯಾತ ಕ್ಯಾಬ್ ಶೇರಿಂಗ್ ಸಂಸ್ಥೆಯನ್ನು ತೊರೆಯುವ ಕುರಿತಂತೆ ಭಾರಿ ಚರ್ಚೆಗಳು ಕೇಳಿಬಂದ ಹಿನ್ನಲೆಯಲ್ಲಿ ಟ್ರಾವಿಸ್ ಕಲಾನಿಕ್ ಅವರು ಟ್ರಂಪ್ ಸಲಹಾ ಸಮಿತಿಯಿಂದ ದೂರ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸ್ವತಃ ಉಬರ್ ಸಂಸ್ಥೆಯ ಸಹ ಸಂಸ್ಥಾಪಕ ಟ್ರಾವಿಸ್ ಕಲಾನಿಕ್ ಅವರು ತಮ್ಮ ಸಂಸ್ಥೆಯ ಸಿಬ್ಬಂದಿಗೆ ಇ-ಮೇಲ್ ರವಾನಿಸಿದ್ದು, ತಾವು ತಮ್ಮ ನಿರ್ಧಾರದ ಕುರಿತಂತೆ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಕೂಲಂಕುಷ ಚರ್ಚೆ ನಡೆಸಿದ್ದಾನೆ ಮತ್ತು ತಮ್ಮ ತೀರ್ಮಾನವನ್ನು ತಿಳಿಸಿದ್ದೇನೆ. ಸಲಹಾ ಸಮಿತಿಯನ್ನು ಸೇರುವುದ ಮಾತ್ರಕ್ಕೆ ಟ್ರಂಪ್ ಅವರನ್ನು ಮತ್ತು ಅವರ ನೀತಿಗಳನ್ನು ಪ್ರಚಾರ ಮಾಡಿದ್ದೇನೆ ಎಂದು ಅರ್ಥವಲ್ಲ. ಆದರೆ ದುರಾದೃಷ್ಟವಶಾತ್ ಇದನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಆರ್ಥೈಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಂತೆಯೇ ಪರೋಕ್ಷವಾಗಿ ಟ್ರಂಪ್ ಅವರ ನಿರಾಶ್ರಿತರ ಮೇಲಿನ ನಿರ್ಭಂಧ ಹಾಗೂ ಮುಸ್ಲಿಂ ರಾಷ್ಟ್ರಗಳ ಪ್ರಜೆಗಳನ್ನು ನಿರ್ಬಂಧಿಸುವ ಆದೇಶವನ್ನು ಪರೋಕ್ಷವಾಗಿ ಖಂಡಿಸಿರುವ ಅವರು, ಇತರೆ ದೇಶದ ಪ್ರಜೆಗಳೂ ಕೂಡ ಅಮೆರಿಕದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ. ಉಬರ್ ಸಂಸ್ಥೆಯ ಪ್ರಗತಿಯಲ್ಲಿ ಅವರ ಪಾತ್ರ ಕೂಡ ಮಹತ್ವದ್ದಾಗಿದೆ ಎಂದು ಹೇಳುವ ಮೂಲಕ ತಮ್ಮ ಸಂಸ್ಥೆಯ ಗ್ರಾಹಕರನ್ನು ಓಲೈಸುವ ಪ್ರಯತ್ನ ಮಾಡಿದ್ದಾರೆ.
ಕಳೆದ ವಾರವಷ್ಟೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ತಮ್ಮ ಆರ್ಥಿಕ ಸಲಹಾ ಸಮಿತಿಯಲ್ಲಿ ಕಲಾನಿಕ್ ಅವರನ್ನು ಸೇರ್ಪಡೆ ಮಾಡಿದ್ದರು. ಇದು ಉಬರ್ ಸಂಸ್ಥೆಯ ವಹಿವಾಟಿನ ಮೇಲೆ ವ್ಯಾಪಕ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.