ಶ್ರೀಲಂಕಾದಲ್ಲಿ ಚೀನಾ ನಿರ್ಮಿಸಲು ಉದ್ದೇಶಿಸಿಇದ ಸಿಲ್ಕ್ ರೋಡ್ ಯೋಜನೆ ವಿಳಂಬ
ಶ್ರೀಲಂಕಾದಲ್ಲಿ 1.1 ಬಿಲಿಯನ್ ಹೂಡಿಕೆ ಮೂಲಕ ಚೀನಾ ಪ್ರಾರಂಭಿಸಲು ಉದ್ದೇಶಿಸಿದ್ದ ಸಿಲ್ಕ್ ರೋಡ್ ಯೋಜನೆ ವಿಳಂಬವಾಗಲಿದೆ.
ಕೊಲಂಬೋ: ಶ್ರೀಲಂಕಾದಲ್ಲಿ 1.1 ಬಿಲಿಯನ್ ಹೂಡಿಕೆ ಮೂಲಕ ಚೀನಾ ಪ್ರಾರಂಭಿಸಲು ಉದ್ದೇಶಿಸಿದ್ದ ಸಿಲ್ಕ್ ರೋಡ್ ಯೋಜನೆ ವಿಳಂಬವಾಗಲಿದೆ. ಬಂದರು ಹಾಗೂ ಕೈಗಾರಿಕಾ ವಲಯ ಅಭಿವೃದ್ಧಿ ಮಾಡಲು ಚೀನಾ ಶ್ರೀಲಂಕಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ಒಪ್ಪಂದಕ್ಕೆ ಶ್ರೀಲಂಕಾದಲ್ಲಿ ಆಂತರಿಕ ವಿರೋಧ ವ್ಯಕ್ತವಾಗಿರುವುದರಿಂದ ಯೋಜನೆ ಜಾರಿ ವಿಳಂಬವಾಗುತ್ತಿದೆ.
ಲಂಕಾ ವಿರೋಧ ಪಕ್ಷದ ನಾಯಕ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಹಾಗೂ ಕಾರ್ಮಿಕ ಸಂಘಟನೆಗಳು ಕೈಗಾರಿಕಾ ವಲಯ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ ಚೀನಾ ಸ್ವತಃ ಹಿಂದೆ ಸರಿದಿದ್ದು, ಸಿಲ್ಕ್ ರೋಡ್ ಹಾಗೂ ಬಂದರು ಅಭಿವೃದ್ಧಿ ಯೋಜನೆ ಎರಡೂ ವಿಳಂಬವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬೀಜಿಂಗ್ ನೆರವಿನಿಂದ ನಿರ್ಮಾಣವಾಗುತ್ತಿರುವ ಹಾಂಬಂತೋಟಾ ಬಂದರಿಗೆ ಖರ್ಚು ಮಾಡಲು ಶ್ರೀಲಂಕಾಗೆ ಹಣದ ಕೊರತೆ ಎದುರಾಗಿದ್ದು, ಈ ಬೆನ್ನಲ್ಲೇ ಆಂತರಿಕ ವಿರೋಧ ಸಹ ವ್ಯಕ್ತವಾಗಿರುವುದರಿಂದ ಕೆಲವು ತಿಂಗಳ ವರೆಗೆ ಬಂದರು ನಿರ್ಮಾಣ ಹಾಗೂ ಕೈಗಾರಿಕಾ ವಲಯ ಅಭಿವೃದ್ಧಿ ಯೋಜನೆ ವಿಳಂಬವಾಗಲಿದೆ.
ಬಂದರು ನಿರ್ಮಾಣಕ್ಕೆ ಹೊರತಾಗಿ ಚೀನಾ ದೊಂದಿಗೆ ಶ್ರೀಲಂಕಾ 15,000 ಎಕರೆಯಷ್ಟು ಭೂಮಿಯಲ್ಲಿ ಕೈಗಾರಿಕಾ ವಲಯ ನಿರ್ಮಿಸುವುದಕ್ಕೂ ಶ್ರೀಲಂಕಾ ಒಪ್ಪಂದ ಮಾಡಿಕೊಂಡಿದೆ. ಆದರೆ ಕೈಗಾರಿಕಾ ವಲಯಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳುವುದರ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ರಾಜಪಕ್ಸೆ ಆಪ್ತ ಸಂಸದರು ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.