ಇಸ್ಲಾಮಾಬಾದ್: ಭಯೋತ್ಪಾನೆ ನಿರ್ಮೂಲನೆ ಬಗ್ಗೆ ಪಾಕಿಸ್ತಾನ-ಆಫ್ಘಾನಿಸ್ತಾನ ಮಾತುಕತೆ ನಡೆಸಿವೆ.
ಉಗ್ರವಾದದ ನಿರ್ಮೂಲನೆ ಬಗ್ಗೆ ಆಫ್ಘಾನಿಸ್ತಾನದೊಂದಿಗೆ ಮಾತನಾಡಿರುವುದರ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಲಹೆಗಾರ ಅಲ್ಲಿನ ಡಾನ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಎರಡೂ ರಾಷ್ಟ್ರಗಳು ಭಯೋತ್ಪಾದನೆಯನ್ನು ಶತ್ರು ಎಂದು ಪರಿಗಣಿಸಿದ್ದು, ಉಗ್ರವಾದದ ನಿರ್ಮೂಲನೆಗೆ ಪರಸ್ಪರ ಸಹಕಾರ ಅಗತ್ಯವೆಂದು ಉಭಯ ದೇಶಗಳ ನಾಯಕರು ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಆಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಹನೀಫ್ ಅತ್ಮರ್ ಅವರಿಗೆ ಪ್ರಸ್ತಾವನೆ ಕಳಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಪ್ಪಂದವೊಂದನ್ನು ಜಾರಿಗೊಳಿಸುವಂತೆ ಕಳೆದ ವಾರ ಆಪ್ಘಾನಿಸ್ತಾನದ ಅಧ್ಯಕ್ಷರ ಕಚೇರಿ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು. ಮಾ.1 ರಂದು ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಆರ್ಥಿಕ ಸಹಕಾರ ಶೃಂಗಸಭೆಯಲ್ಲಿ ಈ ಒಪ್ಪಂದವನ್ನು ಅಧಿಕೃತವಾಗಿ ಜಾರಿಗೆ ತರುವ ನಿರೀಕ್ಷೆ ಇದೆ.