ಸಿ ಎನ್ ಎನ್ ಬಿಡುಗಡೆ ಮಾಡಿರುವ ಪುಸ್ತಕಗಳು
ವಾಷಿಂಗ್ಟನ್: ೨೦೧೬ ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಬಗೆಗಿನ ಪುಸ್ತಕದ ಮುಖಪುಟಕ್ಕೆ ತಮ್ಮ ಅತಿ ಕೆಟ್ಟ ಛಾಯಾಚಿತ್ರವನ್ನು, ಟಿವಿ ಸುದ್ದಿವಾಹಿನಿ ಸಿ ಎನ್ ಎನ್ ಬಳಸಿದೆ ಎಂದು ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಇದರ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್ "'ಆನ್ ಪ್ರಿಸಿಡೆಂಟಡ್' ಎಂಬ ೨೦೧೬ ರ ಅಧ್ಯಕ್ಷೀಯ ಚುನಾವಣೆಗಳ ಬಗ್ಗೆ ಪುಸ್ತಕವನ್ನು ಸಿ ಎನ್ ಎನ್ ಇತ್ತೀಚಿಗೆ ಬಿಡುಗಡೆ ಮಾಡಿದೆ, ಅದು ಚೆನ್ನಾಗಿ ಮಾರಾಟವಾಗುತ್ತದೆ ಎಂದು ನಂಬಿದ್ದೇನೆ ಆದರೆ ಅದಕ್ಕೆ ನನ್ನ ಅತಿ ಕೆಟ್ಟ ಮುಖ ಫೋಟೋವನ್ನು ಬಳಸಿದೆ" ಎಂದು ಬರೆದಿದ್ದಾರೆ.
ಟ್ರಂಪ್ ಅವರ ಅಚ್ಚರಿ ಗೆಲುವಿನ ಕಥೆಯನ್ನು ನಿರೂಪಿಸಿರುವ ಈ ಪುಸ್ತಕವನ್ನು ಸಿ ಎನ್ ಎನ್ ಬರಹಗಾರ ಥಾಮಸ್ ಲೇಕ್ ಬರೆದಿದ್ದಾರೆ.
ಅಧ್ಯಕ್ಷಗಾಥೆಗೆ ಬಿಲಿಯನೇರ್ ಮತ್ತು ಟಿವಿ ರಿಯಾಲಿಟಿ ನಟ, ಸರ್ಕಾರ ಅಥವಾ ಮಿಲಿಟರಿ ಅನುಭವ ಇಲ್ಲದ, ರಾಜಕೀಯ ನಿಯಮಗಳ ಬಗ್ಗೆ ಗೌರವ ಇಲ್ಲದ ಮತ್ತು ಜನರನ್ನು ಅವಮಾನಿಸುವ ಬಗ್ಗೆ ಭಯವಿಲ್ಲದ ಟ್ರಂಪ್ ಮತ್ತು ಅಮೆರಿಕಾದ ಮಾಜಿ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ನಡುವಿನ ಕಾದಾಟದ ಬಗೆಗಿಗಿನ ಆಳವಾದ ವರದಿ ಇದು ಎಂದು ಸಿ ಎನ್ ಎನ್ ಅಂತರ್ಜಾಲ ತಾಣದಲ್ಲಿ ಈ ಪುಸ್ತಕದ ಬಗ್ಗೆ ವಿವರಿಸಲಾಗಿದೆ.
ಪುಸ್ತಕದ ಹೂರಣ ಬಗ್ಗೆ ಟೀಕಿಸದ ಟ್ರಂಪ್ ಟ್ವೀಟ್, ಮುಖಪುಟಕ್ಕೆ ಬಳಸಿದ ತಮ್ಮ ಫೋಟೋದ ಕುರಿತಾಗಿದ್ದಾಗಿದೆ. ಎರಡು ವಿಭಿನ್ನ ಮುಖಪುಟಗಳುಳ್ಳ ಎರಡು ಆವೃತ್ತಿಗಳನ್ನು ಬಿಡುಗಡೆ ಮಾಡಲಾಗಿದ್ದು, ೭೦ ವರ್ಷದ ಅಧ್ಯಕ್ಷ ಟ್ರಂಪ್ ಯಾವ ಫೋಟೋ ಬಳಸಿರುವುದರ ಬಗ್ಗೆ ಟೀಕಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.