ಶ್ರೀಲಂಕಾ: ಜಲಗಡಿ ಉಲ್ಲಂಘಿಸಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ ತಮಿಳುನಾಡಿನ 10 ಮೀನುಗಾರರನ್ನು ಬಂಧಿಸಿ ಎರಡು ದೋಣಿಗಳನ್ನು ವಶಕ್ಕೆ ಪಡೆದಿದೆ.
ಬುಧವಾರ ರಾತ್ರಿ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿದ್ದ ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆ ಬಂಧಿಸಿ ಉತ್ತರ ಶ್ರೀಲಂಕಾದಲ್ಲಿರುವ ಕನ್ಕೆಸಾಂತುರೈಗೆ ಕರೆದೊಯ್ದಿದೆ.
ಬಂಧಿತ ಮೀನುಗಾರರು ಪುದುಕೋಟೈ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಮತ್ತೊಂದು ಘಟನೆಯಲ್ಲಿ ಶ್ರೀಲಂಕಾ ನೌಕಾಪಡೆ 30 ದೋಣಿಗಳಲ್ಲಿದ್ದ ಬಲೆಯನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ 584 ದೋಣಿಗಳು ಮೀನು ಹಿಡಿಯದೆ ವಾಪಸ್ಸು ಬಂದಿದ್ದಾರೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ ಶ್ರೀಲಂಕಾ ಮತ್ತು ಭಾರತದ ನಡುವೆ ಮಾತುಕತೆ ನಡೆದು ಬಂಧಿತ ಮೀನುಗಾರರನ್ನು ಬಿಡುಗಡೆ ಮಾಡಲು ಶ್ರೀಲಂಕಾ ಒಪ್ಪಿಗೆ ಸೂಚಿಸಿತ್ತು.