ವಾಷಿಂಗ್ ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜ.11 ರಂದು ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪ ಇರುವ ಸಾಧ್ಯತೆಯನ್ನು ಒಪ್ಪಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಹ್ಯಾಕಿಂಗ್ ಗೆ ಸಂಬಂಧಿಸಿದಂತೆ ರಷ್ಯಾ ಕೈವಾಡ ಇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆದರೆ ತಮ್ಮ ಗೆಲುವಿಗೆ ರಷ್ಯಾ ಸಹಕರಿಸಿದೆ ಎಂಬ ಅಮೆರಿಕ ಗುಪ್ತಚರ ಇಲಾಖೆ ವರದಿಯನ್ನು ಟ್ರಂಪ್ ನಿರಾಕರಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೆ ಮಾಡಬಾರದಿತ್ತು. ಬಹುಶಃ ಮಾಡುವುದಿಲ್ಲ, ಉಳಿದವರ ಆಳ್ವಿಕೆಗೆ ಹೋಲಿಸಿದರೆ ನನ್ನ ಆಳ್ವಿಕೆಯಲ್ಲಿ ರಷ್ಯಾ ಅಮೆರಿಕಗೆ ಹೆಚ್ಚಿನ ಗೌರವ ನೀಡುತ್ತದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮೆರಿಕಾಗೆ ಸಂಬಂಧಿಸಿದ ವಿಷಯಗಳನ್ನು ಹ್ಯಾಕ್ ಮಾಡುವ ಪಟ್ಟಿಯಲ್ಲಿ ಕೇವಲ ರಷ್ಯಾ ಮಾತ್ರ ಇಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದ್ದು, ಹಿಲರಿ ಕ್ಲಿಂಟನ್ ಅವರ ಇ-ಮೇಲ್ ಗಳನ್ನು ಹ್ಯಾಕ್ ಮಾಡಿ ವರ್ಚಸ್ಸು ಕುಗ್ಗಿಸುವ ಮೂಲಕ ಟ್ರಂಪ್ ಗೆಲುವಿಗೆ ಸಹಕಾರಿಯಾಗಿದೆ ಎಂಬ ಆರೋಪ ಕೇಳಿಬಂದ ನಂತರ ಇದೇ ಮೊದಲ ಬಾರಿಗೆ ಟ್ರಂಪ್ ರಷ್ಯಾ ಹಸ್ತಕ್ಷೇಪದ ಸಾಧ್ಯತೆಯನ್ನು ಒಪ್ಪಿದ್ದಾರೆ.