ವಿದೇಶ

ಅಮೆರಿಕ ಉಪಾಧ್ಯಕ್ಷರಿಗೆ ಅತ್ಯುನ್ನತ ನಾಗರಿಕ ಗೌರವ ನೀಡಿ ಸತ್ಕರಿಸಿದ ಒಬಾಮ!

Srinivasamurthy VN

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುತ್ತಿರುವ ಬರಾಕ್ ಒಬಾಮ ಅವರು ತಮ್ಮ ಅಧಿಕಾರದ ಕೊನೆಯ ಕ್ಷಣದಲ್ಲಿ ತಮ್ಮ ಸಹೋದ್ಯೋಗಿ ಉಪಾಧ್ಯಕ್ಷ ಜೋಯೆ ಬಿಡೆನ್‌ ಅವರಿಗೆ ಜೀವಮಾನದ ಅಚ್ಚರಿ ಗೌರವ ನೀಡಿ ಸತ್ಕರಿಸಿದ್ದಾರೆ.

ಅಮೆರಿಕದಲ್ಲಿ ಬರಾಕ್ ಒಬಾಮ ಆಡಳಿತ ಸಫಲವಾಗಿ ನಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಉಪಾಧ್ಯಕ್ಷ ಜೋಯೆ ಬಿಡನ್ ಅವರಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಒಬಾಮ ಸತ್ಕರಿಸಿದ್ದಾರೆ. ಶ್ವೇತಭವನದಲ್ಲಿ  ನಡೆದ ಸಮಾರಂಭದಲ್ಲಿ ಬರಾಕ್ ಒಬಾಮ ಅವರು ಜೋಯೆ ಬಿಡನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಕಳೆದ 74 ವರ್ಷಗಳಿಂದ ನೀಡುತ್ತಾ ಬಂದಿರುವ "ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ" ಪ್ರಶಸ್ತಿಯನ್ನು  ಒಬಾಮಾ ಘೋಷಿಸಿದಾಗ, ಉಪಾಧ್ಯಕ್ಷ ಬೆಡೆನ್ ನಿಜಕ್ಕೂ ಭಾವಕರಾಗಿ ವೇದಿಕೆಯಲ್ಲೇ ಆನಂದಬಾಷ್ಪ ಸುರಿಸಿದರು.

ಅಮೆರಿಕ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುತ್ತಿರುವ ಒಬಾಮ ಅವರು ಶ್ವೇತಭವನದಿಂದ ಹೊರಡುವ ಮುನ್ನ ಸ್ನೇಹಿತರು ಹಾಗೂ ಸಿಬ್ಬಂದಿಗೆ ಬೀಳ್ಕೊಡುಗೆ ನೀಡಲಾಯಿತು. ಸಮಾರಂಭದಲ್ಲಿ ಬೆಡೆನ್ ಅವರನ್ನು ಅಮೆರಿಕದ  ಅತ್ಯುತ್ತಮ ಉಪಾಧ್ಯಕ್ಷ ಹಾಗೂ ಅಮೆರಿಕದ ಸಿಂಹ ಎಂದು ಬರಾಕ್ ಒಬಾಮಾ ಬಣ್ಣಿಸಿದರು. "ಜೋಯ್ ಗೆ ಸಹ ಅಮೆರಿಕನ್ನರ ಬಗ್ಗೆ ಇರುವ ನಂಬಿಕೆ ಹಾಗೂ ದೇಶದ ಮೇಲೆ ಇರುವ ಪ್ರೀತಿ ಹಾಗೂ ಜೀವಮಾನದ ಸೇವೆ  ತಲೆಮಾರುಗಳ ಕಾಲ ನೆನಪಿನಲ್ಲಿ ಉಳಿಯುವಂಥದ್ದು. ಅಧ್ಯಕ್ಷನಾಗಿ ಕೊನೆಯ ಅವಧಿಯಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ" ಪ್ರಶಸ್ತಿ ಪ್ರದಾನ ಮಾಡುತ್ತಿದ್ದೇನೆ" ಎಂದು  ಒಬಾಮಾ ಭಾವುಕರಾಗಿ ಹೇಳಿದರು.

ಪ್ರಶಸ್ತಿ ಪ್ರದಾನ ವೇಳೆ ಮಿಲಿಟರಿ ಸಹೋದ್ಯೋಗಿಗಳನ್ನು ಕೂಡಾ ವೇದಿಕೆಗೆ ಕರೆದ ಒಬಾಮ ಅವರ ಸಮ್ಮುಖದಲ್ಲೇ ಬಿಡೆನ್ ಅವರಿಗೆ ಮೆಡಲ್ ಪ್ರದಾನ ಮಾಡಿದರು.

ಇನ್ನು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದ ಉಪಾಧ್ಯಕ್ಷ ಜೋಯೆ ಬಿಡೆನ್ ಅವರು, ವೇದಿಕೆಯಲ್ಲೇ ಆನಂದಭಾಷ್ಪ ಸುರಿಸುವ ಮೂಲಕ ತಮ್ಮ ಆನಂದವನ್ನು ವ್ಯಕ್ತಪಡಿಸಿದರು. ಈ ವೇಳೆ "ಅಧ್ಯಕ್ಷರೇ ನಿಮ್ಮ ಋಣ  ತೀರಿಸಲಾಗದ್ದು. ನಿಮ್ಮ ಹಾಗೂ ಕುಟುಂಬದ ಸ್ನೇಹಕ್ಕೆ ನಾನು ಚಿರಋಣಿ" ಎಂದು ಭಾವುಕರಾಗಿಯೇ ಹೇಳಿದರು. ಒಬಾಮಾ ಮತ್ತು ಜೋಯೆ ಬಿಡನ್ ಅವರ ಈ ಭಾವಾನತ್ಮಕ ಕ್ಷಣಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದವು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

SCROLL FOR NEXT