ಜೆರುಸಲೇಂ: ರಕ್ಷಣಾ ವಲಯದಲ್ಲಿ ಇಸ್ರೇಲ್ ಮಹತ್ವದ ಮೈಲುಗಲ್ಲು ಸ್ಥಾಪಿಸಿದ್ದು, ಮುಂದಿನ ಹಂತದ ಕ್ಷಿಪಣಿ ವ್ಯವಸ್ಥೆ ಎಂದೇ ಹೇಳಲಾಗುತ್ತಿರುವ ತನ್ನ "ಆ್ಯರೋ-3" ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆ್ಯರೋ-3 ಪ್ರತಿಬಂಧಕ ರಕ್ಷಣಾ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಎದುರಾಳಿ ರಾಷ್ಟ್ರಗಳು ಎಷ್ಟೇ ಚಾಣಾಕ್ಷವಾಗಿ ನಡೆಸುವ ಕ್ಷಿಪಣಿ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಲ್ಲುವ ಸಾಮರ್ಥ್ಯ ಆ್ಯರೋ-3 ಕ್ಷಿಪಣಿ ವ್ಯವಸ್ಥೆಗಿದೆ. ಬಾಹ್ಯಾಕಾಶ ಮಟ್ಟದಲ್ಲಿ ತೂರಿಬರುವ ಶುತ್ರಪಾಳಯದ ಯಾವುದೇ ಕ್ಷಿಪಣಿಗಳನ್ನು ಬಾಹ್ಯಾಕಾಶದಲ್ಲೇ ಹೊಡೆದುರುಳಿಸುವ ಸಾಮರ್ಥ್ಯವನ್ನು ಆರೋ-3 ಹೊಂದಿದೆ. ಹೀಗಾಗಿ ಇಸ್ರೇಲ್ ನ ಈ ನೂತನ ಮಾದರಿಯ ಕ್ಷಿಪಣಿಯನ್ನು ಮುಂದಿನ ತಲೆಮಾರಿನ ಕ್ಷಿಪಣಿ ಎಂದು ಹೇಳಲಾಗುತ್ತಿದೆ. ಶತ್ರುಪಾಳಯದ ಕ್ಷಿಪಣಿಗಳು ಆಗಸದಲ್ಲಿರುವಂತೆಯೇ ಅವುಗಳನ್ನು ಧ್ವಂಸ ಮಾಡಿ ಇಸ್ರೇಲ್ ಗಡಿ ಪ್ರವೇಶಿಸದಂತೆ ಆ್ಯರೋ-3 ಕ್ಷಿಪಣಿ ತಡೆಯುತ್ತದೆ.
ಇದರಿಂದ ಶುತ್ರಪಾಳಯದ ಪರಮಾಣು, ಜೈವಿಕ ಅಥವಾ ರಾಸಾಯನಿಕ ಯಾವುದೇ ಮಾದರಿಯ ಕ್ಷಿಪಣಿಗಳು ಇಸ್ರೇಲ್ ಮೇಲೆ ಯಾವುದೇ ರೀತಿಯ ಹಾನಿ ಮಾಡದಂತೆ ತಡೆಯುವ ಸಾಮರ್ಥ್ಯವನ್ನು ಈ ಆ್ಯರೋ-3 ಕ್ಷಿಪಣಿ ವ್ಯವಸ್ಥೆ ಹೊಂದಿದೆ. ಬಾಹ್ಯಾಕಾಶದಲ್ಲೇ ಕ್ಷಿಪಣಿಗಳನ್ನು ಧ್ವಂಸ ಮಾಡುವುದರಿಂದ ಕ್ಷಿಪಣಿಯಲ್ಲಿರುವ ವಿಷಕಾರಿ ಅನಿಲ ಅಥವಾ ಅದರೊಳಗಿನ ಸ್ಫೋಟದ ತೀವ್ರತೆ ಇಸ್ರೇಲ್ ಪ್ರವೇಶಿಸದಂತೆ ಆ್ಯರೋ-3 ತಡೆಯುವದರಿಂದ ಇಸ್ರೇಲ್ ಭೂಮೇಲ್ಮೈಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ.
ಆ್ಯರೋ-3 ಕ್ಷಿಪಣಿಯನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿ ಹಾಗೂ ಅಮೆರಿಕದ ಬೋಯಿಂಗ್ ಸಂಸ್ಥೆ ಜಂಟಿಯಾಗಿ ನಿರ್ಮಿಸಿದ್ದು, ಈ ಹಿಂದೆ ಇದೇ ತಂಡ ಆ್ಯರೋ-3 ಕ್ಷಿಪಣಿ ಯೋಜನೆಯಲ್ಲೂ ಜಂಟಿಯಾಗಿ ಕಾರ್ಯನಿರ್ವಹಿಸಿದ್ದವು. 2000ನೇ ಇಸವಿಯಲ್ಲಿ ಆ್ಯರೋ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿತ್ತು. ಆ್ಯರೋ-2 ಮಧ್ಯ ದೂರದ ಕ್ಷಿಪಣಿಯಾಗಿದೆ. ಇದೇ ಯಶಸ್ಸಿನ ಬೆನ್ನಲ್ಲೇ ತಯಾರಿಸಿದ ದೂರಗಾಮಿ ಆ್ಯರೋ-3 ಕ್ಷಿಪಣಿ ಯೋಜನೆ ಕೂಡ ಯಶಸ್ವಿಯಾಗಿದ್ದು, ಪ್ರಸ್ತುತ ಆ್ಯರೋ-3 ಕ್ಷಿಪಣಿಯನ್ನು ಬೋಯಿಂಗ್ ಸಂಸ್ಥೆ ಇಸ್ರೇಲ್ ವಾಯುಸೇನೆಗೆ ಅಧಿಕೃತವಾಗಿ ಹಸ್ತಾಂತರಿಸಿದೆ.
ಪ್ರಮುಖವಾಗಿ ಗಾಜಾಪಟ್ಟಿಯಲ್ಲಿನ ಹಿಂಸಾಚಾರ ಹಾಗೂ ಪ್ಯಾಲೆಸ್ತೀನಿ ಬಂಡುಕೋರರ ದಮನ ಕಾರ್ಯದಲ್ಲಿ ತೊಡಗಿರುವ ಇಸ್ರೇಲಿ ಸೇನೆಯಲ್ಲಿ ಆ್ಯರೋ-2 ಪ್ರಮುಖಪಾತ್ರವಹಿಸಿದೆ. ಇದೀಗ ಆ್ಯರೋ-3 ಕ್ಷಿಪಣಿ ಉಡಾವಣೆ ಕೂಡ ಯಶಸ್ವಿಯಾಗುದರೊಂದಿಗೆ ಇಸ್ರೇಲ್ ಸೇನೆಗೆ ಆನೆಬಲ ಬಂದಂತಾಗಿದೆ.
ವಿವಿಧ ದೇಶಗಳು ದೂರಗಾಮಿ ಕ್ಷಿಪಣಿಗಳನ್ನು ಸಂಶೋಧನೆ ಮಾಡುವ ಮೂಲಕ ಶುತ್ರ ದೇಶಗಳಿಗೆ ಪರೋಕ್ಷ ಎಚ್ಚರಿಕೆ ನೀಡುತ್ತಿದ್ದರೆ, ಇತ್ತ ಇಸ್ರೇಲ್ ಮಾತ್ರ ಈ ದೂರಗಾಮಿ ಕ್ಷಿಪಣಿಗಳನ್ನೇ ಉಡಾಯಿಸುವ ಅದೂ ಕೂಡಾ ಭೂಮಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಾಹ್ಯಾಕಾಶದಲ್ಲೇ ಶುತ್ರಪಾಳಯದ ಕ್ಷಿಪಣಿಗಳನ್ನು ಧ್ವಂಸ ಮಾಡುವ ಪ್ರತಿಬಂಧಕ ಕ್ಷಿಪಣಿಯನ್ನು ಸಂಶೋಧಿಸಿದೆ.
ಇಸ್ರೇಲ್ ನೊಂದಿಗೆ ಭಾರತ ಈ ಹಿಂದೆ ಸುಮಾರು 400 ಮಿಲಿಯನ್ ಡಾಲರ್ ಮೊತ್ತದ ರಕ್ಷಣಾ ಪರಿಕರ ಆಮದು ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಪೈಕಿ ಇಸ್ರೇಲ್ ಚಾಲಕ ರಹಿತ ಲಘು ಯುದ್ಧ ವಿಮಾನ ಡ್ರೋಣ್ ಗಳು ಕೂಡ ಸೇರಿದೆ.