ಭಾರತೀಯ-ಅಮೆರಿಕನ್ ಉತ್ತಮ್ ಧಿಲ್ಲೋನ್
ವಾಷಿಂಗ್ ಟನ್: ಡೊನಾಲ್ಡ್ ಟ್ರಂಪ್ ಅಮೆರಿಕದ 45 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತೀಯ ಮೂಲದ, ಹಿನ್ನೆಲೆಯುಳ್ಳ ಅನೇಕರನ್ನು ಆಡಳಿತದ ಆಯಕಟ್ಟಿನ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ. ಈ ಸಾಲಿಗೆ ಈಗ ಭಾರತೀಯ-ಅಮೆರಿಕನ್ ಉತ್ತಮ್ ಧಿಲ್ಲೋನ್ ಸೇರ್ಪಡೆಯಾಗಿದ್ದಾರೆ.
ಈ ಹಿಂದೆ ಆರ್ಥಿಕ ಸೇವಾ ಸಮಿತಿಯ ಉಸ್ತುವಾರಿ ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಉತ್ತಮ್ ಧಿಲ್ಲೋನ್ ಅವರನ್ನು ಡೊನಾಲ್ಡ್ ಟ್ರಂಪ್, ಆಡಳಿತಾತ್ಮಕ ನೀತಿ ಮತ್ತು ಅನುಶಾಸನಗಳಿಗೆ ಸಂಬಂಧಿಸಿದ ಉನ್ನತ ಹುದ್ದೆಗೆ ನೇಮಕ ಮಾಡಿದ್ದಾರೆ. ಶ್ವೇತ ಭವನದ ಪ್ರಮುಖ ಆಯಕಟ್ಟಿನ ಹುದ್ದೆಗೆ ನೇಮಕವಾಗಿರುವ ಉತ್ತಮ್ ಧಿಲ್ಲೋನ್, ಶ್ವೇತ ಭವನದ ಕೌನ್ಸಿಲ್ ಡೊನಾಲ್ಡ್ ಎಫ್ ಎಂಸಿ ಗನ್ನ್ ನೇತೃತ್ವದ ಕಾನೂನು ತಂಡದ ಭಾಗವಾಗಿ ಆಡಳಿತಾತ್ಮಕ ನೀತಿ ಮತ್ತು ಅನುಶಾಸನಗಳಿಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸಲಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ವಿಶೇಷ ಸಹಾಯಕ ಅಧಿಕಾರಿಯೂ ಆಗಿರುವ ಉತ್ತಮ್ ಧಿಲ್ಲೋನ್ ಗೆ ನ್ಯಾಯಾಂಗ ಇಲಾಖೆಯ ಉಪ ಅಟರ್ನಿ ಜನರಲ್, ಸ್ವದೇಶ ಭದ್ರತಾ ಕಚೇರಿಯ ವಿಭಾಗದ ಮುಖ್ಯಸ್ಥ ಹುದ್ದೆ ಸೇರಿದಂತೆ ಅಮೆರಿಕದ ಆಡಳಿತದ ವಿವಿಧ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವವಿದೆ.
ಉತ್ತಮ್ ಧಿಲ್ಲೋನ್ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ 1987 ರಲ್ಲಿ ಬೋಲ್ಟ್ ಹಾಲ್ ಸ್ಕೂಲ್ ಆಫ್ ಲಾ (ಕಾನೂನು) ದಿಂದ ಪದವಿ ಪಡೆದಿದ್ದಾರೆ.