ಜೆರುಸಲೇಂ: ಡಿಯರ್ ಮಿಸ್ಟರ್ ಮೋದಿ... ಐ ಲವ್ ಯು, ನಾನು ಮತ್ತೆ ಮುಂಬೈಗೆ ಬರುತ್ತೇನೆ ಎಂದು ಮುಂಬೈ ದಾಳಿಯ ಸಂತ್ರಸ್ಥ ಇಸ್ರೇಲಿ ಬಾಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದಾನೆ.
ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಬೈ ದಾಳಿ ಸಂತ್ರಸ್ಥ ಬಾಲಕ ಮೋಶೆನನ್ನು ಭೇಟಿ ಮಾಡಿದರು. ಮೋಶೆ ಭಾರತದ ಪ್ರಧಾನಿಗೆ ಫೋಟೋವೊಂದನ್ನು ಗಿಫ್ಟ್ ನೀಡಿ ಡಿಯರ್ ಮಿಸ್ಟರ್ ಮೋದಿ ಐ ಲವ್ ಯು ಎಂದು ಹೇಳುತ್ತಾನೆ. ಈ ವೇಳೆ ಜೊತೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ತಮ್ಮ ಭಾರತ ಭೇಟಿ ವೇಳೆ ಮೋಶೆನನ್ನು ಕರೆದುಕೊಂಡು ಬರುವುದಾಗಿ ಹೇಳಿದರು.
2008ರ 26/11 ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಮೋಶೆ ಎಂಬ ಬಾಲಕ ಬದುಕುಳಿದಿದ್ದ. ನಾರಿಮನ್ ಹೌಸ್ ನಲ್ಲಿ 6 ಮಂದಿ ಮೇಲೆ ನಡೆದಿದ್ದ ಉಗ್ರರ ಗುಂಡಿನ ದಾಳಿಯಲ್ಲಿ ಬಾಲಕ ತಂದೆ ಮತ್ತು ತಾಯಿಯನ್ನು ಕಳೆದುಗೊಂಡಿದ್ದ. ಆಗ ಮೋಶೆ 2 ವರ್ಷದ ಬಾಲಕನಾಗಿದ್ದ.
ಉಗ್ರರ ದಾಳಿಯಿಂದಾಗಿ ಪೋಷಕರನ್ನು ಕಳೆದುಕೊಂಡಿದ್ದ ಮೋಶೆಗೆ ಇದೀಗ 10 ವರ್ಷ ವಯಸ್ಸಾಗಿದೆ. ಪ್ರಸ್ತುತ ಮೋಶೆ ಇಸ್ರೇಲ್ ನಲ್ಲಿ ತನ್ನ ಅಜ್ಜಿ ಹಾಗೂ ಅಜ್ಜರೊಂದಿಗಿದ್ದಾನೆ.